
ಮಂಗಳೂರು : ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಆರಂಭವಾಗಲಿದ್ದು, ಅದಕ್ಕಾಗಿ 158 ಎಕರೆ ಕೆಐಎಡಿಬಿ ಜಾಗವನ್ನು ಹಸ್ತಾಂತರಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವಾಲಯವು ಭಾರತೀಯ ಕೋಸ್ಟ್ ಗಾರ್ಡ್‌ಗೆ ವೃತ್ತಿಪರ ಅಧಿಕಾರಿಗಳು, ಸಿಬ್ಬಂದಿಯ ತರಬೇತಿಯ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದೆ.
ಅಕಾಡೆಮಿ ಸ್ಥಾಪನೆಗಾಗಿ ಮಂಗಳೂರು ತಾಲೂಕಿನ ಕೆಂಜಾರಿನಲ್ಲಿ 158 ಎಕರೆ ಕೆಐಎಡಿಬಿ ಭೂಮಿಯನ್ನು ಕೋಸ್ಟ್‌ಗಾರ್ಡ್‌ಗೆ ಹಸ್ತಾಂತರ ಮಾಡುವ ಕಾರ್ಯ ಪೂರ್ತಿಯಾಗಿದೆ. ಆರಂಭದಲ್ಲಿ ಕೇರಳದಲ್ಲಿ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದನ್ನೀಗ ಮಂಗಳೂರಿಗೆ ಸ್ಥಳಾಂತರಿಸಿದ್ದು ರಾಜ್ಯದ ಇತಿಹಾಸದಲ್ಲಿ ಮಹತ್ತರ ಬೆಳವಣಿಗೆಯಾಗಿದೆ
ಕರಾವಳಿ ಭದ್ರತೆಯ ನಿಟ್ಟಿನಲ್ಲಿ ಕೋಸ್ಟ್‌ಗಾರ್ಡ್ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಭವಿಷ್ಯದ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸಲು ಅಕಾಡೆಮಿಯ ಅಗತ್ಯ ಹಿಂದಿನಿಂದ ಕೇಳಿಬಂದಿತ್ತು. ಕಣ್ಗಾವಲು ಸೇರಿದಂತೆ ಯಾವುದೇ ಕಡಲ ಪರಿಸ್ಥಿತಿಯನ್ನು ನಿಭಾಯಿಸಲು ಕೋಸ್ವ್ ತಕ್ಕ ಸಾಮರ್ಥ್ಯ ಹೊಂದಿರಬೇಕಾಗುತ್ತದೆ. ಕಡಲಿನ ಮೂಲಕ ಕಳ್ಳಸಾಗಣೆ, ಕಡಲ್ಗಳ್ಳತನ ಕಾರ್ಯಾಚರಣೆ, ತೊಂದರೆಯಲ್ಲಿರುವ ಮೀನುಗಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪರಿಪೂರ್ಣ ಅಧಿಕಾರಿ, ಸಿಬ್ಬಂದಿ ವರ್ಗವನ್ನು ತಯಾರು ಮಾಡುವಲ್ಲಿ ಈ ಅಕಾಡೆಮಿ ಮುಖ್ಯ ಪಾತ್ರ ವಹಿಸಲಿದೆ.