
ಕೊರೋನಾ ಎಂಬ ವೈರಾಣು ಸಮಸ್ತ ವಿಶ್ವವನ್ನೇ ನಡುಗಿಸಿದರೂ, ನೆಟ್ಟಿಗರಿಗೆ ಭರಪೂರ ಮನರಂಜನೆಯ ವಿಷಯವಾಗಿದ್ದೂ ಅಷ್ಟೇ ಸತ್ಯ. ಜತೆಯಲ್ಲಿ ಒಂದಿಷ್ಟು ಧನಾತ್ಮಕ/ಋಣಾತ್ಮಕ ಅಂಶಗಳನ್ನೂ ಒಳಗೊಂಡ ಸಂದೇಶಗಳು. ಇವೆಲ್ಲವನ್ನೂ ಒಂದು ಪುಟ್ಟ ಲೇಖನದಲ್ಲಿ ಸಂಗ್ರಹಿಸಿ ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ ಜಾಲತಾಣಿಗರ ಹಾಸ್ಯ ಪ್ರಜ್ಞೆ ಜಾಗೃತವಾಗಿರುತ್ತದೆ ಎಂಬುದನ್ನು ಪ್ರಸ್ತುತ ಪಡಿಸುವ ಪ್ರಯತ್ನವಿದು.
ಕಾಲಘಟ್ಟಕ್ಕನುಗುಣವಾಗಿ ಬದಲಾವಣೆ ಮಾಡಿದ ಒಂದಿಷ್ಟು ಗಾದೆಗಳು.
●ಕರೀನಾಗೊಂದು ಕಾಲ,ಕೊರೋನಾಗೊಂದು ಕಾಲ.
●ಕೊರೋನಾ ಕೊಳ್ಳೆ ಹೊಡದಾದ ಮೇಲೆ ವಿಮಾನ ನಿಲ್ದಾಣದ ಬಾಗಿಲು ಮುಚ್ಚಿದರಂತೆ.
●ಮಡಿಕೇರಿಗೆ ಬಂದದ್ದು ಮೈಸೂರಿಗೆ ಬರದೇ ಇರುತ್ತಾ.
●ಚೀನಾಗೆ ಆಟ ವಿಶ್ವಕ್ಕೇ ಪ್ರಾಣ ಸಂಕಟ.
●ಒಂದು ಸಲ ಕೆಮ್ಮಿದವನು ಯೋಗಿ, ಎರಡು ಸಲ ಕೆಮ್ಮಿದವನು ಭೋಗಿ, ಮೂರು ಸಲ ಕೆಮ್ಮಿದವನು ರೋಗಿ, ನಾಲ್ಕು ಸಲ ಕೆಮ್ಮಿದರೆ ಹೊತ್ಕೊಂಡೋಗಿ!
●ಇರಲಾರದೆ ಕರೋನಾ ಬಿಟ್ಟಕೊಂಡಂಗೆ
●ರಾತ್ರಿ ಕಂಡ ವಿಮಾನದಲ್ಲಿ ಬೆಳಿಗ್ಗೆ ಕೂತ್ಕೊಂಡ್ನಂತೆ.
●ಕೆಮ್ಮಿನಲ್ಲಿ ಹೋದ ಮಾನ ಮಾಸ್ಕ್ ಹಾಕೊಂಡ್ರು ಬರೋದಿಲ್ಲ.
●ಬೀದಿಲಿ ಕೆಮ್ಮಿ ನೋಡು,ಹಾದಿಲಿ ಸೀನಿನೋಡು.
●ತೂತು ಒಲೆ ಕೆಡಿಸಿತು, ಮಾತು ಮನೆ ಕೆಡಿಸಿತು ಕೊರೋನಾ ಊರನ್ನೇ ಕೆಡಿಸಿತು.
●ಹಿಂದೆ ಗುಂಪಿನಲ್ಲಿ ಗೋವಿಂದ, ಈಗ ಗುಂಪಾದರೆ ಗೋವಿಂದ
●ಕುಡುಕರ ಒತ್ತಾಯದ ಮೇರೆಗೆ ಎರಡು ಬಾರ್ (ತುಳುವಿನಲ್ಲಿ ಬತ್ತದ ಕಾಳು) “ತೆರೆಯಲಾಗಿದೆ”
●ಈಗ ಎರಡೇ ಕಾಲ, ಮನೆಯೊಳಗೆ ಇದ್ದರೆ ಉಳಿಗಾಲ, ಹೊರಗೆ ಹೋದರೆ ಕೊನೆಗಾಲ.
●ಮುಖ ಮುಚ್ಚಾ:ಒಂದು ಕಾಲದಲ್ಲಿ ಬಯ್ಗಳಾಗಿತ್ತು, ಈಗ ಸರ್ಕಾರದ ನಿಯಮವಾಗಿದೆ.
●ಉಗುಳಿಗೆ ಹೋದ ಮಾನ ಈಗ ಪ್ಲಾಸ್ಮಾ ಕೊಡುತ್ತೇನೆಂದರೂ ವಾಪಾಸ್ ಬರಲ್ಲ.
●ಬರೆದದ್ದೆಲ್ಲಾ ಕವನವಲ್ಲ, ಕೆಮ್ಮಿದ್ದೆಲ್ಲಾ ಕೊರೋನಾವಲ್ಲ.
●ಮಂಗಳಕ್ಕೆ ಕಾಲಿಡಲು ಪ್ರಯತ್ನ ಪಡುವವರು ಅಂಗಳಕ್ಕೆ ಕಾಲಿಡಲು ಹೆದರಿದರು
ನಗೆಹನಿಗಳ ಹಕ್ಕುಸ್ವಾಮ್ಯ ಯಾರಿಗೂ ಇರುವುದಿಲ್ಲ, ಏಕೆಂದರೆ ವಿಷಯ ಒಂದೇ ಆದರೂ ಸಂದರ್ಭಕ್ಕೆ ಅನುಗುಣವಾಗಿ ಒಂದಿಷ್ಟು ಬದಲಾವಣೆಗಳೊಂದಿಗೆ ಮುನ್ನೆಲೆಗೆ ಬರುತ್ತದೆ, ಆಗ ಅದು ಹೊಸದಾಗಿ ಕಾಣುತ್ತದೆ. ಇದೀಗ ಉದ್ಭವಿಸಿರುವ ಸಂದಿಗ್ಧ ಕಾಲದಲ್ಲಿ ಹರಿದಾಡಿದ ನಗೆಚಟಾಕಿಗಳ ಸಣ್ಣ ಸಂಗ್ರಹ:
●ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಇರುವವರ ಕೆಲಸಗಳಲ್ಲಿ ಕೆಲವು: ಗ್ಯಾಸ್ ಬರ್ನರಿನಲ್ಲಿ ಎಷ್ಟು ತೂತುಗಳಿವೆ, ಬಿಸ್ಕೆಟಿನಲ್ಲಿ ಎಷ್ಟು ತೂತುಗಳಿವೆ, ಫ್ಯಾನ್ ಸ್ವಿಚ್ ಅದುಮಿದ ನಂತರ ಎಷ್ಟು ಸೆಕೆಂಡುಗಳ ಕಾಲ ಸುತ್ತುತ್ತಲೇ ಇರುತ್ತದೆ, ಪೌರಾಣಿಕ ಸಿನೇಮಾಗಳಲ್ಲಿ ಬರುವ ಒಟ್ಟು ಸೈನಿಕರ ಸಂಖ್ಯೆ ಎಣಿಸಿದರಂತೆ.
●ಮುಖಕ್ಕೆ ಮಾಸ್ಕ್ ಹಾಕುವ ಅಗತ್ಯ ಬಂದಾಗ, ಮಹಿಳೆಯರು ಸೀರೆಗೆ ಹೊಂದುವ ಬಣ್ಣದ ಮಾಸ್ಕ್ ಕೇಳಿದರಂತೆ.
●ಸಾಬೂನಿನ ಜಾಹೀರಾತೊಂದರಲ್ಲಿ “ಬಂಟಿ-ನಿನ್ನ ಸಾಬೂನು ಸ್ಲೋನಾ” ಎಂದು ತಮಾಷೆ ಮಾಡಿದವರು, ಈಗ ಪದೇಪದೇ ಕೈತೊಳೆಯುತ್ತಾರೆ.
●ಮಕ್ಕಳು ತಾಯಿ-ತಂದೆಯ ಬಳಿ ಕೇಳುವ ಪ್ರಶ್ನೆ: ಆವಶ್ಯಕ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಿದೆ, ಯಾವುದನ್ನು ಮುಚ್ಚಿದೆಯೋ ಅದು ಆವಶ್ಯಕ ಸೇವೆಯಲ್ಲವೆಂದು ತಾನೇ ಅರ್ಥ?ಹಾಗಾದರೆ, ಶಾಲೆ ಮುಚ್ಚಿದೆ, ಶಾಲೆ ಆವಶ್ಯಕ ಅಲ್ಲವೆಂದಾಯಿತಲ್ಲ? ಪ್ರಶ್ನೆಗೆ ಉತ್ತರ?
●ಹಿಂದೆ ಕೆಲಸ ಮಾಡಿ ಸುಸ್ತಾಗಿ ನಿದ್ದೆ ಮಾಡುತ್ತಿದ್ದೆವು, ಈಗ ನಿದ್ದೆ ಮಾಡಿ ಮಾಡಿ ಸುಸ್ತಾಗುತ್ತಿದ್ದೇವೆ
●ನಿದ್ದೆ ಎಷ್ಟು ಜಾಸ್ತಿಯಾಗಿದೆಯೆಂದರೆ, ಟಿ.ವಿ. ಧಾರಾವಾಹಿಯ ಹಾಗೆ ನಿದ್ದೆಯಲ್ಲಿ ಕನಸುಗಳು ಪುನರ್ ಪ್ರಸಾರವಾಗುವುದರ ಜತೆಗೆ ಜಾಹೀರಾತುಗಳು ಕೂಡಾ ಬರುತ್ತಿವೆ!
●ಪದೇಪದೇ ಕೈತೊಳೆದು ಕೈಯಲ್ಲಿನ ಧನರೇಖೆಯೇ ಅಳಿಸಿಹೋಗುತ್ತದೆ, ಹಾಗಂತ ತೊಳೆಯದೇ ಇದ್ದರೆ ಆಯುಷ್ಯ ರೇಖೆ ಅಳಿಸಿಹೋಗುತ್ತದೆ!
●ಕೆಲವರಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ. ಮೆನೇಜರ್ ಮತ್ತು ಉದ್ಯೋಗಿ ವೀಡಿಯೊ ಸಂಭಾಷಣೆಯಲ್ಲಿರುವಾಗ ಈ ಕಡೆ ಹೆಂಡತಿ ಕೇಳುತ್ತಾಳೆ, ಕುಕ್ಕರ್ ಎಷ್ಟು ಸೀಟಿ ಬಂತು? ಗಂಡನಿಗೆ ಉತ್ತರ ನೀಡಲಾಗದು, ಆದರೆ ಮೆನೇಜರ್ ಹೇಳುತ್ತಾನೆ:ಮೂರು. ನಗುವುದು ಏನಿದೆ ಅನ್ನುತ್ತೀರಾ? ಉದ್ಯೋಗಿ ಗಮನಿಸದಿದ್ದರೂ ಮೆನೇಜರ್ ಗಮನಿಸಿದ್ದು ಈ ಮನೆಯ ಚಟುವಟಿಕೆಗಳನ್ನು!
●ನಿರ್ಬಂಧವನ್ನು ಉಲ್ಲಂಘಿಸಿ ಓಡಾಡುತ್ತಿದ್ದವನನ್ನು ಹಿಡಿದು ಪೋಲೀಸರು ನಾಲ್ಕೇಟು ಕೊಟ್ಟರು, ಟೀಶರ್ಟಿನಲ್ಲಿ ಬರೆದದ್ದು ಓದಿ ಇನ್ನೂ ನಾಲ್ಕು ಕೊಟ್ಟರು-ಅಲ್ಲಿ ಬರೆದದ್ದು, “ಹಂ ನಹೀ ಸುಧಾರೇಂಗೇ”
●ಪದೇಪದೇ ಟೀ ಮಾಡಿ ಕೊಡಲು ಒತ್ತಾಯಿಸುತ್ತಿದ್ದ ಗಂಡನಿಗೆ, ಕೆಮ್ಮುತ್ತಿದ್ದಾರೆಂದು ಪೋಲೀಸರಿಗೆ ಫೋನ್ ಮಾಡುವುದಾಗಿ ಹೆಂಡತಿ ಬೆದರಿಕೆ ಹಾಕಿದಳಂತೆ. ಗಂಡ, ಮಾಡು, ಜತೆಯಲ್ಲಿ ನೀನೂ ಇರುವುದರಿಂದ ನಿನ್ನನ್ನೂ ಕರೆದುಕೊಂಡು ಹೋಗುತ್ತಾರೆ ಎಂಂದನಂತೆ. ಹೆಂಡತಿ ಗಪ್ಚುಪ್!
●ಲಾಕ್ ಡೌನ್ ಅವಧಿಯಲ್ಲಿ ಕೆಲಸ ಮಾಡದೆ ಉಳಿದ ಕೆಲವರಿಗೆ ಹೊಟ್ಟೆ ಬಂದರೆ, ಇನ್ನೂ ಕೆಲವರಿಗೆ ಕ್ಷೌರ ಮಾಡದೆ, ಮೇಕಪ್ ಮಾಡದೆ ಗುರುತು ಸಿಗಲಿಲ್ಲವಂತೆ, ಇನ್ನೂ ಕೆಲವರಿಗೆ ತಾನು ಎಲ್ಲಿ, ಯಾವ ಕೆಲಸ ಮಾಡುತ್ತಿದ್ದೆ ಎನ್ನುವುದೇ ಮರೆತು ಹೋಗಿತ್ತಂತೆ.
●ಸನ್ಡೇ,ಮನ್ಡೇ ವಾರದ ದಿನಗಳನ್ನು ಅಭ್ಯಾಸ ಮಾಡುತ್ತಿದ್ದವರು, ಈಗ ತಿಂದ್ಕೊಂಡೆ, ಬಿದ್ಕೊಂಡೆ ಅಭ್ಯಾಸ ಮಾಡಿದ್ದಾರೆ.
●ಮೊತ್ತ ಮೊದಲ ಬಾರಿಗೆ ಒಂದು ಕಾಯಿಲೆಗೆ ವೈದ್ಯರಿಗಿಂತ ಹೆಚ್ಚಾಗಿ ಪೋಲೀಸರು ಚಿಕಿತ್ಸೆ ನೀಡಿದ್ದು.
●ಬಾರ್ ಮುಚ್ಚಿದ್ದಕ್ಕೆ ಹೆಂಗಸರು ಖುಷಿ ಪಟ್ಟರೆ, ಚಿನ್ನದ ಅಂಗಡಿ, ಸೀರೆ ಅಂಗಡಿ ಮುಚ್ಚಿದ್ದಕ್ಕೆ ಗಂಡಂದಿರಿಗೆ ಖುಷಿಯಂತೆ.
●ಮಕ್ಕಳ ಮುದ್ದಿನ ಆಟಿಕೆ ಬಾರ್ಬಿ ಲಾಕ್ ಡೌನ್ ಮುಗಿದ ಮೇಲೆ ಚರ್ಬಿ ಆಗುತ್ತಂತೆ, ತಿಂದು ತಿಂದು.
●ಕೆಲವು ಪುರುಷರ ಜೀವನದಲ್ಲಿ Bar ಬದಲು Vim Bar,. Scotch ಬದಲು Scotch brite ಬಂದಿದೆ!
●ಮೊದಲೆಲ್ಲಾ ಯಾವಾಗ ರಜೆ ಬರುತ್ತದೆಂದು ಕಾತರದಿಂದ ಕಾಯುತ್ತಿದ್ದವರು ಈಗ ಯಾವಾಗ ರಜೆ ಮುಗಿಯುತ್ತದೋ ಎಂದು ಕಾಯುವಂತಾಗಿದೆ.
●ಹೆಚ್ಚು ರಜೆಯಿರುವ ಕ್ಯಾಲೆಂಡರ್ ಕೊಡಿ ಅಂತ ಕೇಳಿದ್ದಕ್ಕೆ ಇಷ್ಟು ರಜೆಯದ್ದು ಕೊಡೋದಾ?
●ಬದುಕಲು ದುಡಿಯುವ ಕಾಲವಿತ್ತು, ಈಗ ಬದುಕುವುದಕ್ಕಾಗಿ ದುಡಿಯುವುದನ್ನು ಬಿಟ್ಟು ಸುಮ್ಮನಿರುವ ಕಾಲ ಬಂದಿದೆ.
●ಬೀದಿ ನಾಯಿಗಳು ಗೊಂದಲದಲ್ಲಿವೆಯಂತೆ, ಯಾವಾಗಲೂ ರಸ್ತೆ ಖಾಲಿ ಏಕಿದೆ, ಮನುಷ್ಯರನ್ನು ನಗರಸಭೆಯವರು ಎತ್ಹಾಕೊಂಡು ಹೋದರೋ, ಏನೋ? ಬೊಗಳೋದಕ್ಕೂ ಯಾರೂ ಕಾಣಿಸ್ತಿಲ್ಲ.
●ಕೆಲವರು ಪ್ರತಿದಿನ ಭಾನುವಾರ ಆಗಿದ್ದರೆ ಚೆನ್ನಾಗಿರ್ತಿತ್ತು ಅಂತಿದ್ರು, ಈಗ?
●ಕೊರೋನಾ ನಿಯಂತ್ರಣಕ್ಕೆ ನಾಲ್ಕು ಸಿಂಹಗಳು:ವೈದ್ಯರು, ಪೋಲೀಸರು, ಪೌರ ಕಾರ್ಮಿಕರು-ಎದುರಿಗೆ ಕಾಣಿಸದ ನಾಲ್ಕನೇ ಸಿಂಹ, ಅದೇ ಮನೆಯೊಳಗೇ ಕುಳಿತಿರುವ ನಾವು, ನೀವೆಲ್ಲಾ.
●ಈ ಕೊರೋನಾ, RCB cup ಗೆಲ್ಲಬಾರದೆಂದು ಮಾಡಿದ ಕುತಂತ್ರ.
●Fill form of April, this year, All People Rested In Lockdown
●ಒಂದು ದಿನ ಸಾವಿರಾರು ರೂಪಾಯಿ ಕೊಟ್ಟು ಕಂಡವರ ಮನೆಯಲ್ಲಿ ಇರುವುದಕ್ಕೆ *Home_Stay* ಅಂತಾರೆ.. ಯಾರಿಗೂ ಒಂದು ರೂಪಾಯಿ ಕೊಡದೇ ಮನೆಯಲ್ಲೇ ಇರುವುದಕ್ಕೆ *Stay_Home* ಅಂತಾರೆ.
●ಗಂಡ:ಇದೆಂಥ ಪಾಯಸ ಮಾರಾಯ್ತಿ, ಬರೀ ಹಾಲು ಮಾತ್ರಬರ್ತಿದೆ, ರವೆ ಹಾಗೇ ಉಳೀತಿದೆ.ಹೆಂಡತಿ: ಬಾಯಿಗೆ ಹಾಕಿರೋ ಮಾಸ್ಕ್ ತೆಗೆದು ಕುಡೀರಿ..
●ಪಾನಿಪುರಿ ಅಂಗಡಿಯ ಹುಡುಗ ಸಿಕ್ಕಾಪಟ್ಟೆ ಕೆಮ್ಮಿದಂತೆ ಅನ್ನಿಸಿ, ಪರೀಕ್ಷೆಗೆ ಒಳಪಡಿಸಿದಾಗ ಫಲಿತಾಂಶ “ನೆಗೆಟಿವ್” ಬಂತಂತೆ. ಮತ್ತೆ ನೋಡಿದರೆ ಅದು ಕೆಮ್ಮಲ್ಲ, ಅವನ ಪಾನಿಪುರಿ ಅಂಗಡಿಯ ಖಾಯಂ ಗಿರಾಕಿಗಳು ಪದೇಪದೇ ನೆನಸಿಕೊಂಡ ಕಾರಣಕ್ಕೆ ಅವನಿಗೆ ಬಿಕ್ಕಳಿಕೆ ಬಂದಂದಂತೆ!
●ಕೊರೊನಾದಿಂದ ಈ ವರೆಗೆ ಸತ್ತವರ ಸಂಖ್ಯೆಗಿಂತ ಎಣ್ಣೆ ಸಿಗದೆ ಸತ್ತವರ ಸಂಖ್ಯೆ ಹೆಚ್ಚು
●ಪುಟಾಣಿಯೊಬ್ಬ ಅಂಗಡಿಯವನನ್ನು ಕೇಳುತ್ತಾನೆ:ಸ್ಯಾನಿಟೈಸರ್ ಇದೆಯೇ: ಹೌದು, ಹಾಗಾದರೆ ಅದರಿಂದ ಕೈ ತೊಳ್ಕೊಂಡು 1ಚಾಕಲೇಟ್ ಕೊಡಿ
●ಮೊಬೈಲ್ ರಿಪೇರಿಗೆ ಕೊಟ್ಟ ಮರುದಿನವೇ lockdown ಆದರೆ?
●ಮನೆಗೆ ಮೂರು ನಾಲ್ಕು ನೆಂಟರು ಬಂದ ದಿನವೇ lockdown ಆದರೆ?
●ರಾಮನವಮಿ ಪಾನಕ ಕುಡಿಯುವಾಗ ಮಾಸ್ಕ್ ಧರಿಸದೇ ಇದ್ದದ್ದು ಅಕ್ಷಮ್ಯ ಅಪರಾಧ.
●ಕೊರೋನಾದಿಂದ ಜಗತ್ತು 30 ವರ್ಷ ಹಿಂದಕ್ಕೆ:ಹೇಳಿಕೆ-ನಾನು ಪುನಃ ಶುರುವಿನಿಂದ ಶಾಲೆಗೆ ಹೋಗಬೇಕಾ?
●ಹೊಸ ಚಲನಚಿತ್ರಗಳ ಹೆಸರುಗಳು: ಆಗ ಕೂಡಿ ಬಾಳಿದರೆ ಸ್ವರ್ಗ ಸುಖ ಈಗ, “ಡಿಸ್ಟನ್ಸ್ ಮೈನ್ಟೈನ್ ಮಾಡಿದರೆ ಸ್ವರ್ಗ ಸುಖ” “ಕೆಮ್ಮೊದ್ ತಪ್ಪಾ?” ಮನೇಲಿ ಇಲಿ, ಬೀದೀಲಿ ಹುಲಿ ಆಗಿನ ಸಿನೆಮಾ ಹೆಸರು, ಈಗ,ಮನೇಲೇ ಇರಿ, ಬೀದೀಲಿ ಬಲಿ!
●ಈ ಚೀನಾದವರು ಸರಿಯಾಗಿ ಕಣ್ಣು ಬಿಡೋದೇ ಇಲ್ಲಾ, ಅಂಥವರು ಇಡೀ ಜಗತ್ತನ್ನು ಕಣ್ಣು ಕಣ್ಣು ಬಿಟ್ಟು ನೋಡುವ ಹಾಗೆ ಮಾಡಿ ಬಿಟ್ರು.
●ವಿಶ್ವದ ಎಲ್ಲರಿಗೂ ಮಾಸ್ಕ್ ಹಾಕಿಸಿ, ಎಲ್ಲರ ಮೂಗೂ ಚೀನಾದವರ ಮೂಗಿನ ಹಾಗೆ ಚಪ್ಪಟೆಯಾಗಿದೆ.
●ಪ್ಯಾಂಟ್ ಜಿಪ್ಪು ಆಗಾಗ್ಗೆ ತೆಗೆದು ಹಾಕುತ್ತಿರಬೇಕು, ಲಾಕ್ ಡೌನ್ ಮುಗಿದ ಮೇಲೆ ಜಾಮ್ ಆದರೆ ಕಷ್ಟ.
●ಈಗ ಜನರಿಗೆ ಸ್ಯಾನಿಟೈಸರಿಗಿಂತ ಫೆವಿಕಾಲ್ ಹೆಚ್ಚು ಅಗತ್ಯವಿದೆ.
●ಫೇಸ್ಬುಕ್, ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಪ್ರತೀ ದಿನ ಹೊಸಹೊಸ ಅಡುಗೆ ಮಾಡಿ ಫೊಟೋ ಹಾಕುವವರಿಗೆ ಒಂದು ಪ್ರಶ್ನೆ:ಏನು ಕೊರೋನಾಗೆ ನೈವೇದ್ಯ ಇಡೋದಾ?
●ಆನ್ ಲೈನ್ ತರಗತಿ ಮುಗಿಸಿ ಟೀಚರ್ ಮಕ್ಕಳಿಗೆ ಕೇಳಿದರಂತೆ:ಏನಾದರೂ ಪ್ರಶ್ನೆ ಇದ್ದರೆ ಕೇಳಿ-ಒಬ್ಬ ಹುಡುಗನ ಪ್ರಶ್ನೆ:ಟೀಚರ್, ಸ್ವಲ್ಪ ಹೊತ್ತಿಗೆ ಮೊದಲು ನಿಮಗೆ ಕಾಫಿ ತಂದು ಕೊಟ್ಟದ್ದು ನಿಮ್ಮ ಮಗಳಾ?
●ಆಮಂತ್ರಣ ಪತ್ರಗಳಲ್ಲಿ ಇನ್ನು ಮುಂದೆ, “ಗುರು ಹಿರಿಯರು, ಜಿಲ್ಲಾಧಿಕಾರಿಯವರ ಅನುಮತಿ ಮೇರೆಗೆ ನಿಶ್ಚಯಿಸಿದ ಮುಹೂರ್ತದಲ್ಲಿ” ಎಂದು ಮುದ್ರಿಸಬೇಕಾದೀತು.
●ಕೊರೋನಾ ಎಂಬ ವೈರಸ್ ಚೀನಾದಲ್ಲಿ ಹುಟ್ಟಿ, ಸ್ಪೈನ್, ಇಟೆಲಿಯಲ್ಲಿ ಬೆಳೆದು, ಅಮೇರಿಕಾದಲ್ಲಿ ವಯಸ್ಸಿಗೆ ಬಂದು, ಭಾರತದಲ್ಲಿ ಮರಣಹೊಂದಿತು.
●ಯಾಕೋ ಗೊತ್ತಿಲ್ಲ, ಯಾವಾಗಲೂ ಈ ಸಂದೇಶವನ್ನು ಹತ್ತು ಜನರಿಗೆ ಕಳುಹಿಸಿ, ಕೊರೋನಾ ಕೂಡಲೇ ಮಾಯವಾಗುತ್ತದೆ ಎಂದು ಯಾರೂ ಇದುವರೆಗೆ ಹೇಳಿಲ್ಲ.
●ತರಕಾರಿ ತರೋಕೆ ಹೆಂಡ್ತಿ ಜತೆ ಸ್ಕೂಟರಿನಲ್ಲಿ ಮಾರ್ಕೆಟ್ಟಿಗೆ ಹೋಗಿ ಮನೆಗೆ ವಾಪಸ್ಸು ಬಂದು ಮಾಸ್ಕ್ ಬಿಚ್ಚಿನೋಡಿದ್ರೆ, ಬೇರೆ ಯಾರೋ! ಫೋನ್ ನೋಡಿದರೆ ಹೆಂಡತಿದ್ದು ಲೆಕ್ಕವಿಲ್ಲದಷ್ಟು ಮಿಸ್ ಕಾಲ್!
●ಪದೇಪದೇ ಬರುವ ಮಳೆ ನೋಡಿದರೆ ಆಕಾಶರಾಯನೂ ಪದೇಪದೇ ಕೈತೊಳೆದು ಕೊಳ್ಳುವ ಹಾಗಿದೆ.
●ಐ.ಪಿ.ಎಲ್.ಸ್ಕೋರ್ ನೋಡೋ ಕಾಲದಲ್ಲಿ ಕೊರೋನಾ ಸ್ಕೋರ್ ನೋಡುವ ಹಾಗಾಯಿತು.
●ದೇಶಕ್ಕಾಗಿ ಇನ್ನೂ ಆರು ತಿಂಗಳು ಬೇಕಾದರೂ ಮನೆಯಲ್ಲಿ ಇರಲು ಸಿದ್ಧ: “ಶಾಲಾ ಮಕ್ಕಳು”
●ಸೆಕೆ ಇದ್ದರೆ ಸೆಕೆಗಾಲ, ಮಳೆಯಿದ್ದರೆ ಮಳೆಗಾಲ, ಕೊರೋನಾ ಇದ್ದರೆ? ಕೊನೆಗಾಲ.
●ಹೆಂಗಸರ ಹೊಸ ಟೆನ್ಶನ್, ಮನೆಯಲ್ಲಿದ್ದು ಅವರಿಗಿಂತ ಗಂಡಸರೇ ಹೆಚ್ಚು ಬೆಳ್ಳಗಾಗಿದ್ದಾರಂತೆ.
★ಅತ್ತ ಹಾಸ್ಯವೂ ಅಲ್ಲ, ಇತ್ತ ನಿಜವೂ ಅಲ್ಲದ ಕೆಲವು ಚುಟುಕಗಳು:
●ಬೆಕ್ಕು, ನಾಯಿಗಳು ಮುಂದೊಂದು ದಿನ ತಮ್ಮ ಮರಿಗಳಿಗೆ ಹೀಗೆ ಹೇಳಬಹುದು: ಒಂದು ಕಾಲದಲ್ಲಿ ಎರಡು ಕಾಲಿನಲ್ಲಿ ನಡೆಯುವ ಒಂದು ಜೀವಿಯಿತ್ತು, ಅದನ್ನು ಮನುಷ್ಯರೆಂದು ಕರೆಯುತ್ತಿದ್ದರು.
●ಚೀನಾದವರು ಸಿಕ್ಕಿದ್ದೆಲ್ಲಾ ತಿನ್ನುತ್ತಾರೆನ್ನುವ ಪ್ರತೀತಿಗೆ ಸಂಬಂಧಿಸಿ, ಮೋದಿಯವರು ಚೀನಾ ಅಧ್ಯಕ್ಷರಿಗೆ ಕೇಳಿದರಂತೆ: “ನಿಜ ಹೇಳಿ ಡೈನಸಾರಸ್ ನಿಮ್ಮವರು ತಿಂದು ಅಳಿದದ್ದಲ್ಲ ತಾನೇ?”
●ಸೆಲೂನುಗಳು ಮುಚ್ಚಿರುವುದರಿಂದ,ಮನೆಗಳಲ್ಲಿ ಋಷಿ ಮುನಿಗಳು ಹೆಚ್ಚುತ್ತಾರೆ. ಕಾರಣ: ಗಂಡಸರಿಗೂ ಜಡೆ ಹಾಕುವಷ್ಟು ಕೂದಲು ಬಂದಿರುತ್ತದೆ.
●ಲಿಪ್ಸ್ಟಿಕ್ ಕಂಪೆನಿಗಳು ಮುಚ್ಚಬೇಕಾದೀತೇನೋ, ಒಬ್ಬನ ಪ್ರಶ್ನೆಯಾದರೆ ತುಟಿಗಳು ಕಾಣುವಂತೆ ಪಾರದರ್ಶಕ ಮಾಸ್ಕ್ ಬರಬಹುದು, ಇನ್ನೊಬ್ಬರ ಉತ್ತರ.
●ಹೆಂಡತಿಗೆ ಇಡೀ ದಿನ ಮನೆಯಲ್ಲಿ ಇರುವ ಗಂಡನ ಮುಖ ನೋಡಿ ಸಾಕಾಗಿ ಹೋಯ್ತಂತೆ, ಅದಕ್ಕೆ ಮನೆಯಲ್ಲಿ ಇರುವಾಗಲೂ ಮಾಸ್ಕ್ ಹಾಕಿಕೊಳ್ಳಬೇಕಂತೆ.
●ನಾಲ್ಕು ಜನರು ಒಟ್ಟಾಗಿ ಓರ್ವ ರೋಗಿಗೆ ಎರಡು ಬಾಳೆ ಹಣ್ಣು “ದಾನ” ನೀಡುವ ಚಿತ್ರ, ಚಿಕ್ಕದೊಂದು ಚೀಲದಲ್ಲಿ ಯಾವುದೋ ಧಾನ್ಯವನ್ನು ಒಂದೊಂದು ಮುಷ್ಟಿ ದಾನ ನೀಡುವ ವೀಡಿಯೊಗಳು. ಪ್ರಚಾರ ಪ್ರಿಯರಿಗೆ ಚಾಟಿ ಬೀಸುವಂತಿವೆ.
●ಕೈಗಳಿಗಿಂತ ಹೆಚ್ಚಾಗಿ, ನಮ್ಮ ದೇಶದಲ್ಲಿ ಜನರ ಮೆದುಳನ್ನು ಸ್ವಚ್ಚಗೊಳಿಸುವ ಅಗತ್ಯವಿದೆ.
●ಸೋಂಕು ಗುಣಪಡಿಸಲು ಔಷಧಿ ಸಿಗಬಹುದು, ಕೊಂಕು ಗುಣಪಡಿಸಲು ಔಷಧಿ ಇಲ್ಲ.
●ಭೀಮನ ಅಡುಗೆ ಕೈಚಳಕ ಅಜ್ಞಾತವಾಸದಲ್ಲಿ ಉಪಯೋಗಕ್ಕೆ ಬಂದಂತೆ ಲಾಕ್ ಡೌನ್ ಅವಧಿಯಲ್ಲಿ ಗಂಡಸರ ಕೈಚಳಕ.
●ವಾತಾವರಣ ಎಷ್ಟು ಸ್ವಚ್ಛವಾಗಿದೆಯೆಂದರೆ ಸ್ವರ್ಗದಲ್ಲಿರುವ ನಮ್ಮ ಹಿರಿಯರೂ ಕಾಣುವಷ್ಟು.
★ಬೆಂದ ಮನೆಯಲ್ಲಿ ಹಿರಿದದ್ದೇ ಲಾಭ ಎಂಬ ಮನಸ್ಥಿತಿ:
●ಸಾರ್ವಜನಿಕ ಉಪಯೋಗಕ್ಕೆ ಎಟಿಎಂನಲ್ಲಿ ಇರಿಸಿದ ಸ್ಯಾನಿಟೈಸರ್ ಕದಿಯುವವರು.
●ನಕಲಿ ಮಾಸ್ಕ್ ನಕಲಿ ಥರ್ಮಾಮೀಟರ್, ಸ್ಯಾನಿಟೈಸರ್ ಮಾರಾಟ,
●ಪಾಸ್ ದುರುಪಯೋಗ,ಓಡಾಟಕ್ಕೆ ಮಧ್ಯ ಸಾಗಾಣಿಕೆಗೆ ಸರಕಾರಿ ವಾಹನ, ಆಂಬ್ಯುಲೆನ್ಸ್ ಬಳಕೆ.
●ಕರ್ತವ್ಯದಿಂದ ವಿನಾಯಿತಿ ಪಡೆಯಲು ಮೇಲಧಿಕಾರಿಗಳಿಗೆ ಲಂಚ, ಕಳಪೆ ವೈದ್ಯಕೀಯ ಪರಿಕರಗಳನ್ನು ಖರೀದಿಸಲು ಲಂಚ.
●ಮುಖ್ಯಮಂತ್ರಿಯವರು ಪತ್ರಿಕಾ ಗೋಷ್ಠಿಯಲ್ಲಿ ಬೈಕ್ನಲ್ಲಿ ಓಡಾಡಬಹುದು ಎಂದು ಹೇಳಿದ್ದು ಕೆಲವರಿಗೆ ಬೈಕೊಂಡು ಓಡಾಡಬಹುದು ಅಂತ ಕೇಳಿಸಿತಂತೆ.
ಒಂದಂತೂ ಸತ್ಯ:ಪರಿಸ್ಥಿತಿಯೆಷ್ಟೇ ಕಠಿಣವಿರಲಿ,ಕೊರತೆಯಲ್ಲಿ ಒರತೆ ಕಾಣುವ ಮನಸ್ಥಿತಿ ನಮ್ಮದು.
(ಈ ಲೇಖನದಲ್ಲಿ ಉಪಯೋಗಿಸಿದ ಮಾಹಿತಿಯನ್ನು ಜಾಲತಾಣಗಳಿಂದ ಸಂಗ್ರಹಿಸಲಾಗಿರುವುದರಿಂದ ಅವುಗಳನ್ನು ಸೃಷ್ಟಿಸಿದ ಅಸಂಖ್ಯಾತ, ಅಜ್ಞಾತ ಲೇಖಕರ ಋಣಭಾರವಿದೆ)