
ಉಡುಪಿ ಡಿ.18 : ಕಾಂಗ್ರೆಸ್ ಪಕ್ಷವು ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದು, ರೈತರನ್ನು ದಿಕ್ಕು ತಪ್ಪಿಸುತ್ತದೆ. ಅಧಿಕಾರಕ್ಕೆ ಬಂದರೆ ಕೃಷಿ ನೀತಿಗಳಲ್ಲಿ ಬದಲಾವಣೆ ತರುವುದಾಗಿ ಚುನಾವಣೆ ಪೂರ್ವ ಹೇಳಿಕೆ ನೀಡಿದ್ದ ಕಾಂಗ್ರೆಸ್ ಇದೀಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಗಳಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದು, ಇಬ್ಬಗೆ ನೀತಿ ಪ್ರದರ್ಶಿಸುವ ಮೂಲಕ ಡೋಂಗಿತನ ತೋರಿಸುತ್ತಿದೆ ಅಲ್ಲದೆ ಸಿಎಎ, ಜೆ ಎನ್ ಯು ಪ್ರತಿಭಟನೆಯಲ್ಲಿ ಭಾಗವಹಿಸಿದ ತುಕಡೆ ಗ್ಯಾಂಗ್ ರೈತರ ಪ್ರತಿಭಟನೆಯನ್ನು ಮುನ್ನಡೆಸುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಅವರು ಶುಕ್ರವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಪಕ್ಷ ತನ್ನ 2013 ಮತ್ತು 2017ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರ ಕೂಡ ಕೇಂದ್ರ ಸರಕಾರದ ರೈತ ಮಸೂದೆ ಗಳಿಗೆ ಅನುಮೋದನೆ ನೀಡಿದೆ. ಹೀಗಿದ್ದು ಅವರು ರೈತ ಹೋರಾಟಗಾರರೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೃಷಿ ಮಸೂದೆ ಜಾರಿಗೆ ತರುವ ಮುಂಚಿತವಾಗಿ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಜಾರಿಗೊಳಿಸಲಾಗಿದೆ. ರೈತರ ಕೃಷಿ ಆದಾಯ ದುಪ್ಪಟ್ಟಾಗಬೇಕು ಎನ್ನುವ ಮೋದಿಯವರ ಕಲ್ಪನೆ ಯೊಂದಿಗೆ ರೂಪಿತವಾಗಿರುವ ಯೋಜನೆಗಳನ್ನು ಕೇವಲ ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ವಿರೋಧಿಸುತ್ತಿವೆ. ರೈತರ ಹೋರಾಟವನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿವೆ. ಇದರಿಂದ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು. ಪಂಜಾಬ್ ರಾಜ್ಯದಲ್ಲಿನ ದಲ್ಲಾಳಿಗಳ ಲಾಬಿಯಿಂದಾಗಿ ಈ ಹೋರಾಟ ನಡೆಯುತ್ತಿದೆ ಎಂದರು.
ಕೆನಡಾ ದೇಶದಲ್ಲಿ ಸಿಖ್ ಸಮುದಾಯದ ಮತಗಳ ಓಲೈಕೆಗಾಗಿ ಅಲ್ಲಿನ ಪ್ರಧಾನಿ ರೈತರ ಹೋರಾಟ ವನ್ನು ಬೆಂಬಲಿಸುತ್ತಿದ್ದಾರೆ. ಖಾಲಿಸ್ತಾನ ಬೆಂಬಲಿಗರು ಸಿಎಎ ವಿರೋಧಿ ಹೋರಾಟಗಾರು ದೇಶದ ರೈತರ ಹೋರಾಟದ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ನೂತನ ಕಾಯಿದೆ ಮೂಲಕ ರೈತರ ಆದಾಯದಲ್ಲಿ ದ್ವಿಗುಣ ಮಾಡಬೇಕೆಂಬ ಬಯಕೆ ಪ್ರಧಾನಿಯದ್ದಾಗಿದೆ ಎಂದು ಅವರು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.