
ಅರ್ಧ ಗಂಟೆ ಜಾಹೀರಾತು ನೋಡಿದರೆ 240 ರೂಪಾಯಿ ಸಂಪಾದಿಸಬಹುದು ಎಂದೆಲ್ಲಾ ಪೂಸಿಬಿಟ್ಟು ಬರೋಬ್ಬರಿ 4 ಲಕ್ಷ ಜನರಿಗೆ ಟೋಪಿ ಹಾಕಿದ ಭೂಪನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅನ್ ಲೈನ್ ಮುಖಾಂತರ ಚೈನ್ ಲಿಂಕ್ ರೀತಿಯಲ್ಲಿ ವಂಚನೆಯ ಜಾಲ ಹೆಣೆದಿದ್ದ. ಬಂಧಿತ ಆರೋಪಿ ಜಾನಿ ಎಂದು ಗುರುತಿಸಲಾಗಿದೆ. ಈತ ‘ಅಡ್ವರ್ಟೈಸ್ಮೆಂಟ್ ಪ್ರಾಜೆಕ್ಟ್’ ಎಂದು ಹೇಳಿ ಸುಮಾರು ನಾಲ್ಕು ಲಕ್ಷ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ಧೋಖಾ ಮಾಡಿದ್ದಾನೆ. ಜೆಎಎ ಲೈಫ್ ಸ್ಟೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎನ್ನುವ ಕಂಪನಿ ನಡೆಸುತ್ತಿದ್ದ ಜಾನಿ ಕಂಪನಿಯ ಡೈರೆಕ್ಟರ್ ಕೂಡ ಆಗಿದ್ದ.
ಜೂ. 21 ಕ್ಕೆ ಕಂಪನಿಯ ಅಡ್ವರಟೈಸ್ಮೆಂಟ್ ಪ್ರಾಜೆಕ್ಟ್ ಲಾಂಚ್ ಮಾಡುತ್ತಿದ್ದು, ಈ ಸಂಬಂಧ ಹಲವಾರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ ಎಂದು ವಂಚಿಸಿದ್ದ. www.jaalilifestyle.com ವೆಬ್ ಸೈಟ್ ಮುಖಾಂತರ ಮೊದಲು 1109 ರೂಪಾಯಿ ಹಣವನ್ನು ಆನ್ಲೈನ್ ಮುಖಾಂತರ ಪಾವತಿ ಮಾಡಿ ಸದಸ್ಯತ್ವವನ್ನು ಪಡೆದುಕೊಳ್ಳಿ, ಪ್ರಾಜೆಕ್ಟ್ ಶುರು ಆದ ನಂತರ ಪ್ರತಿ ದಿನ 60 ಜಾಹಿರಾತುಗಳನ್ನು ನೋಡಿದಲ್ಲಿ ಪ್ರತಿ ಒಂದು ಜಾಹಿರಾತಿಗೆ 4 ರೂಗಳಂತೆ ದಿನಕ್ಕೆ 240 ರೂಪಾಯಿ, ತಿಂಗಳಿಗೆ 7200 ರೂಪಾಯಿ ವರ್ಷಕ್ಕೆ ಒಟ್ಟು 86400 ರೂಪಾಯಿವರೆಗೆ ಸಂಪಾದನೆ ಮಾಡಬಹುದೆಂದು ಆಸೆ ಹುಟ್ಟಿಸಿದ್ದ.ಅಷ್ಟೇ ಅಲ್ಲದೆ ಸದಸ್ಯತ್ವ ಆದ ಮೇಲೆ ಬೇರೆಯವರನ್ನೂ ಸೇರಿಸಿದರೆ ಪ್ರಾಫಿಟ್ ನೀಡುವುದಾಗಿ ಆಮಿಷ ಒಡ್ಡಿದ್ದ. 10 ಜನರನ್ನು ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದಲ್ಲಿ 4,400 ರೂಪಾಯಿ ನೀಡುತ್ತೇನೆ, 100 ಜನರನ್ನು ಸದಸ್ಯರನ್ನಾಗಿ ಮಾಡಿದರೆ 17,600 ರೂಪಾಯಿ ಮತ್ತು 1000 ಜನರನ್ನ ಸದಸ್ಯರನ್ನ ಮಾಡಿದಲ್ಲಿ 1 ಲಕ್ಷದ 76 ಸಾವಿರ ರೂಪಾಯಿ ಲಾಭದ ಆಸೆ ತೋರಿಸಿದ್ದ. ಚೈನ್‌ಲಿಂಕ್ ರೀತಿ ಲಾಭದ ಆಸೆ ಹುಟ್ಟಿಸಿ ಹಣ ಪಡೆದಿದ್ದ ಜಾನಿ, ವಾಟ್ಸ್ಆ್ಯಪ್, ಸೋಷಿಯಲ್ ಮೀಡಿಯಾ ಮುಖಾಂತರ ಮೀಟಿಂಗ್ ಕೂಡ ನಡೆಸುತ್ತಿದ್ದ. ಇದುವರೆಗೂ 4 ಲಕ್ಷ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಜಾನಿಯ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವೇಶ್ವರ ನಗರದಲ್ಲಿರುವ ಲೈಫ್ಸ್ಟೈಲ್ ಕಂಪನಿ ವಿರುದ್ಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.