ಸೆ.25 ಬಿಜೆಪಿ ‘ಸೇವಾ ಪಾಕ್ಷಿಕ’ ಪ್ತಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ಆಯುಷ್ಮಾನ್ ಕಾರ್ಡ್, ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ

ಬಿಜೆಪಿ ಉಡುಪಿ ಜಿಲ್ಲೆ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಕೋಷ್ಠ ಮತ್ತು ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಇದರ ಜಂಟಿ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ತಜ್ಞ ವೈದ್ಯರಿಂದ ‘ಸೇವಾ ಪಾಕ್ಷಿಕ’ ಅಭಿಯಾನ ಹಾಗೂ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಪತ್ರಕರ್ತರು, ಪತ್ರಿಕಾ ವಿತರಕರು, ಕೇಬಲ್ ಅಪರೇಟರ್ ಸಿಬ್ಬಂದಿಗಳು ಮತ್ತು ಸಾರ್ವಜನಿಕ ಬಂಧುಗಳಿಗೆ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’ವು ಸೆ.25 ರವಿವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00ರ ವರೆಗೆ ಉಡುಪಿ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ.
ಜೊತೆಗೆ ಆಯುಷ್ಮಾನ್ ಭಾರತ್ ಕಾರ್ಡ್ – ಅಭಾ ಕಾರ್ಡ್ ನೊಂದಾವಣೆ ಹಾಗೂ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ ನಡೆಯಲಿದೆ. ಶಿಬಿರದ ಅಪೇಕ್ಷಿತರು, ಸಾರ್ವಜನಿಕ ಬಂಧುಗಳು ಹಾಗೂ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಶಿಬಿರದ ಪ್ರಯೋಜನವನ್ನು ಪಡೆಯಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ ಹೇಳಿದರು.
ಅವರು ಶನಿವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಮಾಧ್ಯಮ ತಂಡದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸೆ.25ರ ಬೆಳಿಗ್ಗೆ 9.00ಕ್ಕೆ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ! ರಾಮಚಂದ್ರ ಕಾಮತ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕುಂಜಿಬೆಟ್ಟು ವಾರ್ಡ್ ನಗರಸಭಾ ಸದಸ್ಯ ಗಿರೀಶ್ ಎಮ್. ಅಂಚನ್, ಪಕ್ಷದ ಪ್ರಮಖರು, ಜಿಲ್ಲಾ ಮಾಧ್ಯಮ ತಂಡ ಹಾಗೂ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಪ್ರಮುಖರು ಭಾಗವಹಿಸಲಿದ್ದಾರೆ.
ಆರೋಗ್ಯ ತಪಾಸಣಾ ಶಿಬಿರದಲ್ಲಿ ಔಷಧಿ ವಿತರಣೆ ಬಗ್ಗೆ ಆಶ್ರಿತಾ ಟ್ರಸ್ಟ್, ಕೋಟ ಹಾಗೂ ರಕ್ತ ಪರೀಕ್ಷೆಯ ಬಗ್ಗೆ ನವ್ಯ ಚೇತನ ಟ್ರಸ್ಟ್ ಮತ್ತು ಶಿವಾನಿ ಡಯಾಗ್ನೊಸ್ಟಿಕ್ಸ್, ಉಡುಪಿ ಇವರು ಸಹಕರಿಸಲಿದ್ದಾರೆ.
ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆಯು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಮಣಿಪಾಲ ಇವರ ಸಹಯೋಗದೊಂದಿಗೆ ನಡೆಯಲಿದೆ.
ಆಯುಷ್ಮಾನ್ ಕಾರ್ಡ್ – ಅಭಾ ಕಾರ್ಡ್ ನೊಂದಾವಣೆಯ ಬಗ್ಗೆ ಶ್ರೀಮತಿ ಸೌಮ್ಯ, ಗ್ರಾಮ ಒನ್ ಉದ್ಯಾವರ ಹಾಗೂ ಶ್ರೀಕಾಂತ್ ನಾಯಕ್ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಅಲೆವೂರು ಇವರು ಸಹಕರಿಸಲಿದ್ದಾರೆ.
ಆಯುಷ್ಮಾನ್ ಕಾರ್ಡ್ ನೊಂದಾವಣೆ ಹಾಗೂ ಕೋವಿಡ್ ಲಸಿಕೆ ಪಡೆಯಲಿಚ್ಛಿಸುವವರು ತಮ್ಮ ಆಧಾರ್ ಕಾರ್ಡ್ ಪ್ರತಿ ಹಾಗೂ ಆಧಾರ್ ಲಿಂಕ್ ಇರುವ ಮೊಬೈಲನ್ನು ತಮ್ಮೊಂದಿಗೆ ತರುವಂತೆ ಸೂಚಿಸಲಾಗಿದೆ.
ಜಿಲ್ಲೆಯ ಪತ್ರಕರ್ತ ಬಂಧುಗಳು, ಪತ್ರಿಕಾ ವಿತರಕರು, ಕೇಬಲ್ ಅಪರೇಟರ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕ ಬಂಧುಗಳು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಿ ಈ ಸುಸಜ್ಜಿತ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಇತರ ಸೇವಾ ಕಾರ್ಯಗಳ ಪ್ರಯೋಜನವನ್ನು ಪಡೆಯಬೇಕು ಎಂದು ಕಿಣಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಮಿತಿ ಸದಸ್ಯರಾದ ವಿಜಯ್ ಶೆಟ್ಟಿ ಕೊಂಡಾಡಿ, ವಿನಾಯಕ್ ನಾಯಕ್, ಉಡುಪಿ ಗ್ರಾಮಾಂತರ ಸಹ ಸಂಚಾಲಕ ಮಹೇಶ್ ಕೊಕ್ಕರ್ಣೆ, ಕಾಪು ಮಂಡಲ ಸಂಚಾಲಕ ಸಮರ್ಥ ಶೆಟ್ಟಿ ಉಪಸ್ಥಿತರಿದ್ದರು.