
ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದೆ.
ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ತೆರಳುತ್ತಿದ್ದ ವೇಳೆ ಆತೂರು ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನವನ್ನು ತಡೆದಿದ್ದಾರೆ. ಈ ವೇಳೆ ದಾಖಲಾತಿ ತೆಗೆದುಕೊಂಡು ರಸ್ತೆ ದಾಟುವ ವೇಳೆ ಟಾಟಾ ಏಸ್ ಗೂಡ್ಸ್ ವಾಹನವು ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳದಲ್ಲಿ ನೂರಾರು ಜನ ಸೇರಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾ ನಿರತರನ್ನು ಸಮಾಧಾನಿಸುತ್ತಿದ್ದಾರೆ.