
ಬ್ರಹ್ಮಾವರ ಯೋಜನಾ ಪ್ರಾಧಿಕಾರ ರಚನೆಯಿಂದಾಗಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಆಡಳಿತಾತ್ಮಕ ಹಾಗೂ ತಾಂತ್ರಿಕವಾದ ಸಮಸ್ಯೆಗಳು ಉಂಟಾಗಿರುವುದರಿಂದ ಯೋಜನಾ ಪ್ರಾಧಿಕಾರ ರದ್ದು ಪಡಿಸುವಂತೆ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮಾಡಿದ ಮನವಿ ಪುರಸ್ಕರಿಸಿದ ಸರ್ಕಾರ ಬ್ರಹ್ಮಾವರ ಯೋಜನಾ ಪ್ರಾಧಿಕಾರ ರದ್ದು ಪಡಿಸಿ ಆದೇಶ ಹೊರಡಿಸಿದೆ.
ಬ್ರಹ್ಮಾವರ ಪಟ್ಟಣವನ್ನು ಪುರಸಭೆ ಘೋಷಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದುದರಿಂದ ಬ್ರಹ್ಮಾವರಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4-ಎ ರನ್ವಯ ಸ್ಥಳೀಯ ಯೋಜನಾ ಪ್ರದೇಶವನ್ನು ಘೋಷಿಸಿ ಆದೇಶಿಸಲಾಗಿತ್ತು. ಆದರೆ ಪ್ರಸ್ತುತ ಬ್ರಹ್ಮಾವರ ಪುರಸಭೆ ಘೋಷಣೆ ಮಾಡುವ ಪ್ರಕ್ರಿಯೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದರು ಯೋಜನಾ ಪ್ರಾಧಿಕಾರ ಚಾಲನೆಯಲ್ಲಿತ್ತು. ಇದರಿಂದಾಗಿ ಈ ಭಾಗದ ಚಾಂತಾರು, ಹಾರಾಡಿ, ವಾರಂಬಳ್ಳಿ, ಹಂದಾಡಿ ಈ ನಾಲ್ಕು ಪಂಚಾಯತ್ ಗಳಲ್ಲಿ 9&11 ಹಾಗೂ ಕಟ್ಟಡ ಲೈಸನ್ಸ್ ನೀಡುವಲ್ಲಿ ಜನರಿಗೆ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪಟ್ಟಣ ಪುರಸಭೆ ಘೋಷಣೆ ಆಗುವವರೆಗೆ ಸ್ಥಳೀಯ ಯೋಜನಾ ಪ್ರದೇಶ ಘೋಷಣೆ ಮಾಡಿರುವುದನ್ನು ರದ್ದು ಪಡಿಸುವಂತೆ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಮುಖ್ಯಮಂತ್ರಿಯವರಿಗೆ ಹಾಗೂ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಿ ಒತ್ತಾಯಿಸಿದ್ದರು.
ನಿರಂತರವಾಗಿ ಇಲಾಖಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸ್ಥಳೀಯ ಸ್ಥಿತಿಗತಿಗಳುನ್ನು ಮನವರಿಕೆ ಮಾಡಿ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸರ್ಕಾರ ಬ್ರಹ್ಮಾವರ ಯೋಜನಾ ಪ್ರಾಧಿಕಾರವನ್ನು ರದ್ದು ಪಡಿಸಿ ಆದೇಶ ಹೊರಡಿಸಿದೆ.