
ನವದೆಹಲಿ: ಪಶ್ಚಿಮ ಕರಾವಳಿ ತೀರದಲ್ಲಿ ತೌಕ್ತೆ ಚಂಡಮಾರುತದ ಭೀಕರತೆ ಅಂತ್ಯವಾಗುತ್ತಿದ್ದಂತೆಯೇ ಮತ್ತೊಂದು ಚಂಡಮಾರುತದ ಮುನ್ನೆಚ್ಚರಿಕೆ ಬಂದಿದೆ. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಈ ಚಂಡಮಾರುತ ಈ ಬಾರಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ತೀರಕ್ಕೆ ಹಾನಿಯುಂಟು ಮಾಡುವ ಸಾಧ್ಯತೆಯಿದೆ.
ಈ ಚಂಡಮಾರುತ ದೇಶಕ್ಕೆ ನೈಋತ್ಯ ಮಾನ್ಸೂನ್ಅನ್ನು ಕೂಡ ತನ್ನೊಂದಿಗೆ ಸೆಳೆದುಕೊಂಡು ಬರಲಿದೆ. ಇದು ಮೇ 21ಕ್ಕೆ ಅಂಡಮಾನ್ಗೆ ಅಪ್ಪಳಿಸುವ ಸಾಧ್ಯತೆಯಿದ್ದು ದೇಶದ ಪಾಲಿಗೆ ನಿರ್ಣಾಯಕವಾಗಿರಲಿದೆ. ಸಾಮಾನ್ಯವಾಗಿ ಮಾನ್ಸೂನ್ ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಆಗಮಿಸಿದ ಹತ್ತು ದಿನಗಳ ನಂತರ ಕೇರಳದಲ್ಲಿ ಪ್ರಾರಂಭವಾಗುತ್ತದೆ. ಆದರೆ ಚಂಡಮಾರುತ ಕಾರಣದಿಂದಾಗಿ ಇದು ಏರುಪೇರಾಗುವ ಸಂಭವವಿದೆ. ಕಳೆದ ವರ್ಷ ನಿಸರ್ಗ ಮತ್ತು ಅಮ್ಫಾನ್ ಚಂಡಮಾರುತವೂ ಇದೇ ರೀತಿಯ ಪರಿಣಾಮವನ್ನುಂಟು ಮಾಡಿತ್ತು.
ಭಾರತದ ಕರಾವಳಿಗೆ ಮೇ 26ಕ್ಕೆ ಯಾಸ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಭಾರತೀಯ ಹವಾಮಾನ ಇಲಾಖೆ ಯಾಸ್ ಚಂಡಮಾರುತ ಅಪ್ಪಳಿಸುವ ಸ್ಥಳ ಮತ್ತು ಸಮಯವನ್ನು ಅಂದಾಜಿಸಿದೆ. ಮೇ 26ರ ಸಂಜೆ ದೇಶದ ಪೂರ್ವ ಅಥವಾ ಕೋರೊಮಂಡಲ್ ತೀರಕ್ಕೆ ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ.