
ಬೆಂಗಳೂರು: ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಹಾಗೂ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ಶುಕ್ರವಾರ ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸಿ ರಾಜ್ಯದಲ್ಲಿ ಕರ್ನಾಟಕ ಬಂದ್ ಮಾಡುವುದಿಲ್ಲ ಎಂದು ರೈತ ಸಂಘಟನೆಗಳು ತಿಳಿಸಿವೆ.
ಮೊನ್ನೆಯಿಂದ ಮೂರನೇ ದಿನಕ್ಕೆ ಕಾಲಿಟ್ಟಿರುವ ರೈತ ಸಂಘದ ಹೋರಾಟ ರಾಜ್ಯದಲ್ಲಿ ತಾರಕಕ್ಕೇರಿದ್ದು, ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿತ್ತು, ಆದ್ರೆ ಈ ಬಗ್ಗೆ ಪ್ರತಿಕ್ರಯಿಸಿರುವ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸೆಪ್ಟೆಂಬರ್ 25ರಂದು ರಾಜ್ಯದಲ್ಲಿ ಬಂದ್ ಇರೋದಿಲ್ಲ, ಆದರೆ 28ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಲ್ ಪಾಸ್ ಮಾಡೋದನ್ನ ನಿಲ್ಲಿಸಿದ್ರೆ ಅಂದೂ ಕೂಡ ಬಂದ್ ಇರೋದಿಲ್ಲ ಎಂದಿದ್ದಾರೆ.
ಆದರೆ ಇನ್ನೊಂದೆಡೆ ರೈತ ಮುಖಂಡ ನಾಗೇಂದ್ರ ಮಾತನಾಡಿ, ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಂದ್ ಮಾಡುವ ನಿರ್ಧಾರವನ್ನ ಕೈ ಬಿಡಲಾಗಿದೆ. ವಿವಿಧ ಸಮಘಟನೆಗಳ ಅಭಿಪ್ರಾಯದಂತೆ ಸಮಯ ಅವಕಾಶ ಕಡಿಮೆ ಆಗಿರೋದ್ರಿಂದ ಸೆಪ್ಟೆಂಬರ್ 28ಕ್ಕೆ ರಾಜ್ಯವನ್ನ ಬಂದ್ ಮಾಡಲು ನಿರ್ಧರಿಸಿದ್ದೇವೆ. ಅಂದು ಸಿಎಂ ಅವರು ಬಿಲ್ ಪಾಸ್ ಮಾಡಿದರೆ ಹೇಗೂ ಬಂದ್ ನಡೆಯುತ್ತೇ, ಒಂದು ವೇಳೆ ಬಿಲ್ ಪಾಸ್ ಮಾಡಿಲ್ಲ ಅಂದರೂ ಬಂದ್ ನಡೆದೇ ನಡಿಯುತ್ತೆ ಎಂದಿದ್ದಾರೆ.
ಹೀಗಾಗಿ ರೈತ ಮುಖಂಡರಲ್ಲೇ ಈಗ ಭಿನ್ನಾಭಿಪ್ರಾಯಗಳು ಎದುರಾಗಿದ್ದು, ಇದೆಲ್ಲದಕ್ಕೂ ಇಂದು ಸಂಜೆ ಸಭೆ ನಡೆಸಿ, ನಾಳೆ ಬೆಳಿಗ್ಗೆ ರೈತ ಮುಖಂಡರನ್ನೆಲ್ಲಾ ಒಳಗೊಂಡ ಪತ್ರಿಕಾಗೋಷ್ಟಿಯಲ್ಲಿ ಸರಿಯಾದ ನಿರ್ಧಾರದ ಮಾಹಿತಿ ಸಿಗಲಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.