ರಾಜ್ಯ

ಜನವರಿ 1 ರಿಂದ ವಿದ್ಯಾಗಮ ಪುನರಾರಂಭ- ಸಚಿವ ಸುರೇಶ್ ಕುಮಾರ್‌

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ ಜಾರಿಗೆ ಬಂದಿದ್ದ ವಿದ್ಯಾಗಮ ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲೆಗಳನ್ನು ತೆರೆಯದಿರುವ ಕಾರಣ ಜನವರಿ 1 ರಿಂದ ವಿದ್ಯಾಗಮ ಪುನರಾರಂಭಿಸಲಾಗುತ್ತಿದೆ.

ಗ್ರಾಮೀಣ ಭಾಗದ ಮಕ್ಕಳು ಆನ್‌ಲೈನ್ ತರಗತಿಗಳಿಗೆ ನೆಟ್ ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಸುಧಾರಿತ ಮೊಬೈಲ್ ಕೊರತೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಹಿನ್ನೆಲೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಜನವರಿ 1ರಿಂದ ಪರಿಷ್ಕೃತ ರೂಪದಲ್ಲಿ ಮತ್ತೆ ವಿದ್ಯಾಗಮ ವನ್ನ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಕಳೆದ ಆಗಸ್ಟ್ 8 ರಿಂದ ವಿದ್ಯಾಗಮ ವನ್ನು ಆರಂಭಿಸಲಾಗಿತ್ತು. ನಂತರ ಅ.10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಈಗ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ವಿದ್ಯಾಗಮ ಯೋಜನೆ ಅನುಷ್ಠಾನಗೊಳ್ಳಲಿದೆ.
ಕೊರೊನಾ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನು ನಿರಂತರವಾಗಿರಿಸಲು, ತಂತ್ರಜ್ಞಾನದ ಲಭ್ಯತೆ ಯಿಲ್ಲದ  ಗ್ರಾಮೀಣ ಭಾಗದ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ತಜ್ಞರ ಸಮಿತಿಯ ಶಿಫಾರಸ್ಸನ್ನು ಆಧರಿಸಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಆರಂಭಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು, ಸಮುದಾಯ ಮತ್ತು ಹಲವು ಸಂಘಟನೆ ಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು.
ವಿದ್ಯಾಗಮ ಆರಂಭವನ್ನು ಶಾಲೆಗಳ ಆರಂಭ ಎಂದು ಯಾರೂ ಭಾವಿಸಬಾರದು. ಕಲಿಕೆ ನಿರಂತರವಾಗಿಬೇಕು ಎಂಬ ದೃಷ್ಟಿಯಿಂದ ಈ ವಿದ್ಯಾಗಮ ಯೋಜನೆ ಪುನಾರಂಭಿಸಲಾಗಿದೆ. ಸ್ವಲ್ಪ ಬದಲಾವಣೆ ಮಾಡಿ ವಿದ್ಯಾಗಮವನ್ನು ಮತ್ತೆ ಜಾರಿಗೆ ತರಬೇಕು ಎಂದು ಶಿಕ್ಷಕ ವಲಯದಲ್ಲೂ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿ ಕೆಲವು ಸುಧಾರಿತ ಕ್ರಮಗಳೊಡನೆ ಈ ಯೋಜನೆಯನ್ನು ಮತ್ತೆ ಆರಂಭಿಸಲಾಗಿದೆ ಎಂದಿದ್ದಾರೆ.

ಶಿಕ್ಷಣ ಇಲಾಖೆ ಈ ಬಾರಿ ಹಲವು ಸುಧಾರಣೆಗಳನ್ನು ಕೈಗೊಂಡಿದ್ದು, ಯೋಜನೆ ಕೇವಲ ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿಲ್ಲ. ಖಾಸಗಿ ಶಾಲೆಗಳು ಸಹ 1 ರಿಂದ 10ನೇ ತರಗತಿವರೆಗೆ ಅವಕಾಶವಿದೆ. ಇದು ಯಾವ ವಿದ್ಯಾರ್ಥಿಗೂ ಕಡ್ಡಾಯವಲ್ಲ. ತಂದೆ-ತಾಯಿ ಒಪ್ಪಿಗೆ ಕೊಟ್ಟರೆ ಮಾತ್ರ ವಿದ್ಯಾರ್ಥಿ ಗಳು ಹಾಜರಾಗಬಹುದು. ಎಲ್ಲರಿಗೂ ಕೊರೊನಾ ಮಾರ್ಗಸೂಚಿ ಕಡ್ಡಾಯ. ಆರೋಗ್ಯದಲ್ಲಿ ತೊಂದರೆಗಳಿದ್ದರೆ ವಿದ್ಯಾರ್ಥಿಗಳು ಗುಣಮುಖರಾಗುವವರೆಗು ಬರುವಂತಿಲ್ಲ. ಆಯಾ ಜಿಲ್ಲೆಗಳ ಜಿ.ಪಂ ಮುಖ್ಕಾರ್ಯನಿರ್ವಹಣಾಧಿಕಾರಿ ಗಳು ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker