
ನವದೆಹಲಿ: ರಸ್ತೆ ಸಂಚಾರ ಸಚಿವಾಲಯದ ಅಧಿಸೂಚನೆಯೊಂದನ್ನ ಹೊರಡಿಸಿದ್ದು, ವಾಹನ ಚಾಲಕರು ಪಥ ತಿಳಿಯಲು ಅಂದ್ರೆ ನ್ಯಾವಿಗೇಷನ್ಗೆ ಮಾತ್ರವೇ ಮೊಬೈಲ್ ಫೋನ್ಗಳನ್ನ ಬಳಸಬಹುದು ಎಂದು ಹೇಳಿದೆ.
ತಿದ್ದುಪಡಿಯಾದ ಮೋಟಾರು ವಾಹನ ಕಾಯ್ದೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿದ್ದು, ಇದರನ್ವಯ ಚಾಲಕರು ತಮ್ಮ ಏಕಾಗ್ರತೆಗೆ ಭಂಗ ಬಾರದ ರೀತಿಯಲ್ಲಿ ಮೊಬೈಲ್ ಬಳಸಬಹುದು. ಹೌದು, ಹಾದಿಯ ನ್ಯಾವಿಗೇಷನ್ಗಾಗಿ ವಾಹನದ ಡ್ಯಾಷ್ಬೋರ್ಡ್ ಮೇಲೆ ಮೊಬೈಲ್ ಫೋನ್ ಇಟ್ಟಿರಬೇಕು. ಹಾಗಂತ, ವಾಹನ ಚಾಲನೆ ವೇಳೆ ಮೆಸೇಜ್ ಅಥವಾ ಕರೆ ಮಾಡುವಂತಿಲ್ಲ.
ಇನ್ನು ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ್ರೆ, ಈ ನಿಯಮ ಉಲ್ಲಂಘನೆಯಡಿ 5,000 ರೂಪಾಯಿ ವರೆಗೆ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ನಿಗದಿಪಡಿಸಿದೆ. ಇನ್ನು ಕೆಲವೊಂದು ಸಮಯಗಳಲ್ಲಿ ಈ ಎರಡನ್ನೂ ಏಕಕಾಲಕ್ಕೆ ವಿಧಿಸಲೂ ಅವಕಾಶವಿದೆ.
ಇನ್ನೊಂದು ಮಹತ್ವದ ಸಂಗತಿಗಳನ್ನ ಇದ್ರಲ್ಲಿ ಸೇರಿಸಲಾಗಿದ್ದು, ಇನ್ಮುಂದೆ ಚಾಲನಾ ಪರವಾನಗಿ (ಡಿಎಲ್), ಪರ್ವಿುಟ್ಗಳು, ನೋಂದಣಿ (ಆರ್ಸಿ), ವಿಮೆ ಮತ್ತು ಫಿಟ್ನೆಸ್ ಸರ್ಟಿಫಿಕೆಟ್ ಮುಂತಾದ ಕಾಗದ ಪತ್ರಗಳ ಡಿಜಿಟಲ್ ದಾಖಲೆಗಳ ಬಳಕೆಗೂ ಸಚಿವಾಲಯ ಅನುಮತಿ ನೀಡಿದೆ. ಈ ಮೂಲಕ ದಾಖಲೆ ಪತ್ರಗಳ ಸುಗಮ ಪರಿಶೀಲನೆ ಮತ್ತು ನಿಯಮಗಳ ಉಲ್ಲಂಘನೆ ದಾಖಲಾತಿಗೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಗೆ ಹಾದಿ ಸುಗಮಗೊಳಿಸುವಲ್ಲಿ ಸರ್ಕಾರ ಮಹತ್ವದ ಕ್ರಮಗಳನ್ನ ಕೈಗೊಳ್ಳುತ್ತಿದೆ. ಭ್ರಷ್ಠಾಚಾರ ನಿಯಂತ್ರಿಸುವಲ್ಲಿ ಈ ಕ್ರಮ ಸಹಕಾರಿಯಾಗುವುದು ಎಂದು ಹೇಳಲಾಗ್ತಿದೆ.