ಕರಾವಳಿ

ಕೂಲಿ ಕಾರ್ಮಿಕರಿಗಾಗಿ ವಿಶೇಷ ಲಸಿಕಾ ಶಿಬಿರ: ಜಿಲ್ಲಾಧಿಕಾರಿ

ಉಡುಪಿ: ಕೂಲಿ ಕಾರ್ಮಿಕರು ಬೆಳಗ್ಗೆ ಬೇಗನೇ ಕೆಲಸಕ್ಕೆ ತೆರಳಬೇಕಾಗಿರುವುದರಿಂದ ಅವರಿಗೆ ಲಸಿಕೆ ಪಡೆಯಲು ಸಮಯದ ಅನಾನುಕೂಲವಾಗಲಿದ್ದು, ಅವರಿಗಾಗಿ ಭಾನುವಾರ ಬೆಳಗ್ಗೆ 7 ರಿಂದ 10 ಗಂಟೆಯವರೆಗೆ ವಿಶೇಷ ಲಸಿಕಾ ಶಿಬಿರ ಏರ್ಪಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಉಡುಪಿ ನಗರದ ವಿವಿಧ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹೈರಿಸ್ಕ್ ಪ್ರದೇಶವಾದ ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಫಲಾನುಭವಿಗಳು ಲಸಿಕೆ ಪಡೆದ ಬಗ್ಗೆ ವಿಚಾರಣೆ ನಡೆಸಿದರು.

ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದು, ಬೆಳಗ್ಗೆ ಬೇಗ ಕೆಲಸಕ್ಕೆ ತೆರಳಬೇಕಾಗುತ್ತದೆ ಎಂದು ಅರಿತ ಜಿಲ್ಲಾಧಿಕಾರಿಗಳು, ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್‌ಗಳಲ್ಲಿ, ಕಾರ್ಮಿಕರು ಕೆಲಸಕ್ಕೆ ಒಟ್ಟು ಸೇರುವ ಸ್ಥಳದಲ್ಲಿ, ವಿಶೇಷ ಶಿಬಿರಗಳನ್ನು ಭಾನುವಾರ ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಆಯೋಜನೆ ಮಾಡುವಂತೆ ಹಾಗೂ ಲಸಿಕಾ ಮೇಳದ ದಿನದಲ್ಲಿ ವಲಸೆ ಕಾರ್ಮಿಕರಿಗಾಗಿ ವಿಶೇಷ ಲಸಿಕಾ ಶಿಬಿರಗಳನ್ನು ಆಯೋಜಿಸಿ, ಎಲ್ಲಾ ಕಾರ್ಮಿಕರೂ ಎರಡೂ ಡೋಸ್ ಲಸಿಕೆ ಪಡೆಯುವಂತೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ನಗರಸಭೆಯಿಂದ ಯೋಜನೆ ರೂಪಿಸಿ ಅದರಂತೆ ಕಾರ್ಯರ್ನಿಹಿಸುವಂತೆ ಸೂಚಿಸಿದರು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಏರ್ಪಡಿಸಲಾದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ, ಈ ಲಸಿಕಾ ಕೇಂದ್ರದಲ್ಲಿ ಸುಮಾರು 25 ರಿಂದ 30 ಫಲಾನುಭವಿಗಳು ಲಸಿಕೆ ಪಡೆಯಲು ಆಗಮಿಸಿದ್ದರು.

ಕೇವಲ ಒಬ್ಬ ಸಿಬ್ಬಂದಿಯಿಂದ ಮೊಬೈಲ್‌ನಲ್ಲಿ ಡಾಟಾ ಎಂಟ್ರಿ ನಡೆಸುವುದು ಕಷ್ಟವಾಗುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಕೂಡಲೇ ಮತ್ತೊಬ್ಬರು ಸಿಬ್ಬಂದಿಯನ್ನು ಈ ಕೇಂದ್ರಕ್ಕೆ ಒದಗಿಸುವ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು. ನಂತರ ಲಸಿಕೆ ಪಡೆಯಲು ಬಂದ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಜಿಲ್ಲಾ ಕೋವಿಡ್ ಲಸಿಕಾ ನೋಡಲ್ ಅಧಿಕಾರಿ ಡಾ. ಎಂ.ಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆಯ ಲಸಿಕಾ ಉಸ್ತುವಾರಿ ಡಾ. ಅಶ್ವಿನ್ ಕುಮಾರ್, ನಗರಸಭೆಯ ಪೌರಾಯುಕ್ತ ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!