
ಬೆಂಗಳೂರು: ಹೈಕಮಾಂಡ್ ಸೂಚನೆ ನೀಡಿದ ತಕ್ಷಣ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಯಡಿಯೂರಪ್ಪ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಪಕ್ಷದ ಹೈಕಮಾಂಡ್ ಹೇಳುವವರೆಗೂ ಸಿಎಂ ಆಗಿರುತ್ತೇನೆ. ಪಕ್ಷದ ಪರಿಮಿತಿಯೊಳಗೆ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಯಡಿಯೂರಪ್ಪ, ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷದ ವರಿಷ್ಟರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ ಎಂದರು.
ರಾಜ್ಯದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಹೈಕಮಾಂಡ್ ಸೂಚಿಸಿದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಉಪಯೋಗಿಸಿಕೊಂಡು ಕೆಲಸ ಮಾಡಿದ್ದೇನೆ ಎಂದರು.
ಕಳೆದ ವಾರ ಸಚಿವ ಯೋಗೇಶ್ವರ್ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಬಳಿಕ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಹೈಕಮಾಂಡ್ ಭೇಟಿ ಮಾಡಿದ್ದರು. ಇದೀಗ ಈ ರಾಜಕೀಯ ಬೆಳವಣಿಗೆ ಮಹತ್ವ ಪಡೆದಿದೆ.