
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೇಟೆಯಲ್ಲಿ ಖೋಟಾ ನೋಟು ಚಲಾವಣೆಯ ಪ್ರಯತ್ನ ನಡೆಯತೊಡಗಿದೆ ಎನ್ನಲಾಗಿದ್ದು, ಗುರುವಾರ ಮುಂಜಾನೆ ಹೂ ಮಾರುವ ವ್ಯಕ್ತಿಯೊಬ್ಬರಿಗೆ ಅಪರಿಚಿತರೊಬ್ಬರು 200 ರೂ.ಗಳ ಖೋಟಾ ನೋಟು ನೀಡಿದ್ದಾರೆ ಎನ್ನುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಳ್ಯ ನಗರದಲ್ಲಿ ಬುಟ್ಟಿಯಲ್ಲಿ ಹೂ ಹೊತ್ತುಕೊಂಡು ಹೋಗಿ ವ್ಯಾಪಾರ ಮಾಡುವ ಹಾಸನ ಜಿಲ್ಲೆಯ ಅರಕಲುಗೋಡಿನ ಮೂರ್ತಿ ಎಂಬ ವ್ಯಕ್ತಿಗೆ 200 ರೂಪಾಯಿ ಮುಖ ಬೆಲೆಯ ನಕಲಿ ನೋಟು ಕೊಟ್ಟು, 20 ರೂಪಾಯಿಯ ಹೂ ಪಡೆದುಕೊಂಡು ಚಿಲ್ಲರೆ 180 ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಮುಂಜಾನೆ 5.30 ವೇಳೆಗೆ ಆಗಿದುದರಿಂದ 200 ರೂ. ನೋಟನ್ನು ಸರಿಯಾಗಿ ಗಮನಿಸಲು ಹೂ ವ್ಯಾಪಾರಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಸ್ವಲ್ಪ ಹೊತ್ತು ಕಳೆದ ನಂತರ ನೋಟನ್ನು ಪರಿಶೀಲಿಸುವಾಗ ಅನುಮಾನ ಬಂದ ಅವರು ಸಮೀಪದಲ್ಲಿದ್ದ ರಿಕ್ಷಾ ನಿಲ್ದಾಣಕ್ಕೆ ಹೋಗಿ ಚಾಲಕ ರಲ್ಲಿ ತೋರಿಸಿದರು. ಆಗ ಇದು ಖೋಟಾ ನೋಟೆಂದು ತಿಳಿದು ಬಂದಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಸುಳ್ಯ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.