
ದಾವಣಗೆರೆ: ಹಳೆಯ ಕಾಲದ ಪಾರಂಪರಿಕ ನಾಣ್ಯ ನೀಡುವುದಾಗಿ ನಂಬಿಸಿ ಮುಂಬೈನ ಪಾನ್ ಬೀಡಾ ಶಾಪ್ ಮಾಲೀಕನಿಗೆ ಎಳು ಲಕ್ಷ ವಂಚಿಸಿರುವ ಘಟನೆ ದಾವಣಗೆರೆ ನಗರದ ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ಘಟನೆ ನಡೆದಿದೆ.
ಪೂರ್ವ ಮುಂಬೈನ ಗುಲಾಬ್ ಚಂದ್ ಶೀತಲ್ ಪ್ರಸಾದ್ ಗುಪ್ತಾ ಅವರಿಗೆ ಹರ್ಷದ್ ರಾಜ್ ಕುಮಾರ್ ಪಾಠಕ್, ಕರ್ನಾಟಕದ ರಮೇಶ್ ಹಾಗೂ ಮಹಾರಾಷ್ಟ್ರದ ನಾಸಿಕ್‌ನ ಅಮನ್ ಶೇಖ್ ಹಾಗೂ ಜೀಶಾನ್ ಶೇಖ್ ಚಿನ್ನದ ನಾಣ್ಯ ನೀಡುವುದಾಗಿ ಮೋಸ ಮಾಡಿದ್ದಾರೆ.
ಗುಲಾಬ್ ಚಂದ್ ಹಾಗೂ ಹರ್ಷದ್ ರಾಜ್‌ಕುಮಾರ್ ಪಾಠಕ್ ಅಕ್ಕಪಕ್ಕದ ಮನೆಯವರಾಗಿದ್ದು, ಆರೋಪಿ ಹರ್ಷದ್ ರಾಜ್ ಕುಮಾರ್ ಪಾಠಕ್, ಅಮನ್ ಶೇಖ್ ಹಾಗೂ ಜೀಶನ್ ಶೇಖ್ ಅವರನ್ನು ಗುಲಾಬ್ ಚಂದ್‌ಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಈ ವೇಳೆ ಅಮನ್ ಶೇಖ್ ಎಂಬಾತ ಕರ್ನಾಟಕದಲ್ಲಿ ನನ್ನ ಸ್ನೇಹಿತ ರಮೇಶ್ 5 ಕೆಜಿ ಪಾರಂಪರಿಕ ನಾಣ್ಯವನ್ನು ಇಟ್ಟಿದ್ದು, ಹಣಕಾಸಿನ ಸಮಸ್ಯೆಯಿಂದಾಗಿ ಕಡಿಮೆ ಬೆಲೆಗೆ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾನೆ. ಹುಬ್ಬಳ್ಳಿಯ ಚೆಕ್ ಪೋಸ್ಟ್ ಬಳಿ ನನ್ನ ಸಹೋದರ ಜೀಶನ್ ಬಳಿ ಈ ನಾಣ್ಯಗಳನ್ನು ನೋಡಿದ್ದೇನೆ ಎಂದು ಗುಲಾಬ್ ಚಂದ್‌ಗೆ ಹೇಳಿದ್ದಾನೆ.
ಕಡಿಮೆ ಬೆಲೆಗೆ ನಾಣ್ಯಗಳನ್ನು ತಂದು ಮುಂಬೈನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆಮಿಷ ಒಡ್ಡಿದ ಆರೋಪಿಗಳು ೩೬೦೦ ಚಿನ್ನದ ನಾಣ್ಯಗಳಿಗೆ ೧೦ ಲಕ್ಷವಾಗುತ್ತದೆ. ನಾನು ಚೌಕಾಸಿ ಮಾಡಿ ೭ ಲಕ್ಷಕ್ಕೆ ಕೊಡಿಸುತ್ತೇನೆ ಎಂದು ಗುಲಾಬ್ ಚಂದ್ ಅವರನ್ನು ನಂಬಿಸಿದ್ದಾರೆ.
ಇದನ್ನೆಲ್ಲಾ ನಂಬಿದ ಗುಲಾಬ್ ಚಂದ್, ತಮ್ಮ ಪತ್ನಿ ಹಾಗೂ ಹರ್ಷದ್ ರಾಜ್ ಕುಮಾರ್ ಜತೆ ಹುಬ್ಬಳ್ಳಿಗೆ ಹೊರಟು ಬಂದಿದ್ದಾರೆ. ಆದರೆ ಆರೋಪಿಗಳು ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ಬರಲು ಹೇಳಿದ್ದಾರೆ. ಅದರಂತೆಯೇ ಲೋಕಿಕೆರೆಗೆ ಬಂದ ಗುಲಾಬ್ ಚಂದ್ ಕುಟುಂಬಕ್ಕೆ ರಮೇಶ್ ಎಂಬಾತ ನನ್ನ ಬಳಿ ೩೬೦೦ ಪಾರಂಪರಿಕ ನಾಣ್ಯಗಳು ಇವೆ ಎಂದು ಹೇಳಿ ಕುಂಕುಮ ಲೇಪಿಸಿರುವ ನಾಣ್ಯಗಳನ್ನು ನೀಡಿದ್ದಾನೆ. ಆದರೆ ಮುಂಬೈನಲ್ಲಿ ಹೋಗಿ ಈ ನಾಣ್ಯವನ್ನು ಪರೀಕ್ಷಿಸಿದಾಗ ತಾಮ್ರಲೇಪಿತ ನಾಣ್ಯಗಳು ಎಂದು ತಿಳಿದುಬಂದಿದೆ. ಸದ್ಯ ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ .