ಲಾಕ್ಡೌನ್ ಹೇರುವ ಅಧಿಕಾರ ಇನ್ನು ಮುಂದೆ ಜಿಲ್ಲಾಧಿಕಾರಿಗೆ : ಮೋದಿ

ದೆಹಲಿ : ಕೊರೋನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಹೇರುವುದು ಸೇರಿದಂತೆ ಇತರ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಇದೀಗ ಜಿಲ್ಲಾಧಿಕಾರಿಗಳು ವಹಿಸಲು ಸ್ವತಂತ್ರರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಕೊರೋನಾ ಹರಡದಂತೆ ತಡೆಗಟ್ಟಬೇಕು. ಇದು ಅತ್ಯಂತ ಸವಾಲಿನ ಕೆಲಸ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಯೋಗ್ಯ ಕ್ರಮ ಕೈಗೊಳ್ಳಬಹುದಾಗಿದೆ.
ಕೃಷಿ ಚಟುವಟಿಕೆ ಕೈಗೊಳ್ಳಲು ನಿರ್ಬಂಧ ಹೇರದಂತೆಯೂ ಪ್ರಧಾನಿ ಸೂಚನೆ ನೀಡಿದ್ದಾರೆ. ಒಟ್ಟಾರೆ ದೇಶದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತವಾದ ಆಯಾ ಜಿಲ್ಲಾ ಆಡಳಿತಗಳು ಅಗತ್ಯ ಕ್ರಮ ಜರುಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇದೀಗ ಆದೇಶ ಹೊರಡಿಸಿದ್ದಾರೆ.
ಕೊರೋನಾ ಪ್ರಥಮ ಅಲೆ ಆರಂಭವಾದಾಗ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಲಾಕ್ ಡೌನ್ ಹೇರಿದ್ದರು. ಆ ಸಂದರ್ಭದಲ್ಲಿ ಕರ್ನಾಟಕದ ಉಡುಪಿ, ಕಾರವಾರ ಹಾಗೂ ಚಾಮರಾಜ ನಗರ ಜಿಲ್ಲಾಧಿಕಾರಿಗಳು ಅತ್ಯಂತ ಕಟ್ಟುನಿಟ್ಟಿನ ಕ್ರಮ ಅನುಸರಿಸಿ ಕೋವಿಡ್ ಹತೋಟಿಗೆ ತಂದು ಸ್ಥಳೀಯ ಜನರಿಂದ ಹಾಗೂ ಸರ್ಕಾರಗಳಿಂದ ಜನಮೆಚ್ಚುಗೆ ಗಳಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳಿಗೆ ಲಾಕ್ಡೌನ್ ಹೇರುವ ಅಧಿಕಾರ ಸಿಕ್ಕಿದೆ.