
ನವದೆಹಲಿ: ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಸಂಬಂಧ ಆರೋಗ್ಯಇಲಾಖೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ರೋಗ ಪ್ರಕರಣದ ಮಾಹಿತಿಯನ್ನು ಕೇಂದ್ರ ಆರೋಗ್ಯ ಇಲಾಖೆಗೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ರೋಗ ನಿರೋಧಕ ಶಕ್ತಿ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಈ ಸಂದರ್ಭದಲ್ಲಿ ಈ ಬ್ಲ್ಯಾಕ್ ಫಂಗಸ್ ಹೊಂಚು ಹಾಕಿ ಮನುಷ್ಯನ ಮೇಲೆ ದಾಳಿ ನಡೆಸುತ್ತಿದೆ.
ಕಣ್ಣಿನ ದೃಷ್ಟಿ ನಾಶವಾಗುವುದು ಸೇರಿದಂತೆ ಹಲವು ಮಾರಕ ರೋಗಗಳನ್ನು ಈ ಬ್ಲ್ಯಾಕ್ ಫಂಗಸ್ ಹರಡುತ್ತಿದೆ. ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ರೋಗವನ್ನು ಈಗಾಗಲೇ ದೃಢೀಕರಿಸಲಾಗಿದ್ದು, ಆಯ್ದು ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯದ ಕೊಡುಗೆ ಪ್ರಕಟಿಸಲಾಗಿದೆ.