
ಹೊರ ರಾಜ್ಯಗಳಿಂದ ಬಂದು ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇರುವವರ ಬಗ್ಗೆ ಆಯಾ ವಾರ್ಡ್ ಗಳ ನಗರಸಭಾ ಸದಸ್ಯರಿಗೆ ಮಾಹಿತಿ ನೀಡಿ ಅಧಿಕಾರಿಗಳು ಅವರ ಜೊತೆಯಾಗಿ ಕೋವಿಡ್ – 19 ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಅವರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.*
ಉಡುಪಿ ನಗರಸಭೆಯ ಕುಂದುಕೊರತೆಗಳ ಕುರಿತು ದಿ. 15-06-2020ರಂದು ಉಡುಪಿ ನಗರಸಭೆಯ ಸತ್ಯಮೂರ್ತಿ ಸ್ಮಾರಕ ಸಭಾ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಹಲವಾರು ಮಂದಿ ಆಗಮಿಸಿದ್ದು, ಅದರಲ್ಲಿ ಮಹಾರಾಷ್ಟ್ರ ದಿಂದ ಬಂದಿರುವವರಿಗೆ 14 ದಿನಗಳ ಹೋಂ ಕ್ವಾರೈಂಟೈನ್ ಹಾಗೂ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿರುವವರ ಬಗ್ಗೆ ನಿಗಾವಹಿಸಿ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರಸ್ತುತ ನಗರಸಭೆಗೆ ವಹಿಸಿರುತ್ತಾರೆ. ಈ ಸಂದರ್ಭದಲ್ಲಿ ಟಾಸ್ಕ್ ಫೊರ್ಸ್ ನ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸದಸ್ಯರು ಆಯಾ ವಾರ್ಡ್ ಗಳ ಸದಸ್ಯರಿಗೆ ವಿವರಗಳನ್ನು ನೀಡಿ ಜೊತೆಯಾಗಿ ಕೆಲಸ ಮಾಡಬೇಕು.
ಹೋಂ ಕ್ವಾರಂಟೈನ್ ಇರುವ ಪ್ರತಿ ಏರಿಯಾಗಳಲ್ಲಿ ಇತರ ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಕೆಲಸ ಮಾಡುತ್ತಾ ಅವರಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸವನ್ನು ಮಾಡಬೇಕು. ಹೋಂ ಕ್ವಾರೈಂಟೈನ್ ನಲ್ಲಿ ಇರಿಸಿದ ಜನರ ಮೇಲೆ ಟಾಸ್ಕ್ ಫೋರ್ಸ್ ತಂಡವು ಹೆಚ್ಚಿನ ನಿಗಾವಹಿಸಿ. ನಿಯಮ ಉಲ್ಲಂಘಿಸಿದವರಿಗೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಕೋವಿಡ್ – 19 ಸಂಬಂಧ ಲಾಕ್ ಡೌನ್ ಹೇರಿದಾಗ ನಗರಸಭಾ ಸದಸ್ಯರ ಸೇವೆ ಅವಿಸ್ಮರಣೀಯವಾದದ್ದು. ಆಹಾರ ಕಿಟ್ಟನ್ನು ಒದಗಿಸುವಲ್ಲಿ ಮತ್ತು ವಲಸೆ ಕಾರ್ಮಿಕರಿಗೆ ಊಟೋಪಚಾರ ವ್ಯವಸ್ಥೆ ಮಾಡುವಲ್ಲಿ ಹಾಗೂ ಉಚಿತ ಬಸ್ ವ್ಯವಸ್ಥೆ ನಿರ್ವಹಿಸುವಲ್ಲಿ ಅವರ ಸೇವೆಯನ್ನು ನೆನಪಿಸುತ್ತಾ ಅಭಿನಂದನೆಯನ್ನು ಸಲ್ಲಿಸಿದರು.
ಮಳೆಗಾಲ ಪ್ರಾರಂಭವಾಗಿದ್ದು ನಗರಸಭಾ ವ್ಯಾಪ್ತಿಯ ಒಳಚರಂಡಿ ಹಾಗೂ ರಸ್ತೆಗಳ ಸಮರ್ಪಕ ನಿರ್ವಹಣೆಯ ಬಗ್ಗೆ ಹಾಗೂ ದಾರಿದೀಪಗಳ ವ್ಯವಸ್ಥೆಯ ಬಗ್ಗೆ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯ ಬಗ್ಗೆ ಮತ್ತು ಕಚೇರಿಯಲ್ಲಿ ಕಡತ (File) ವಿಲೇವಾರಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡದೆ ಹೆಚ್ಚಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತರಾದ ಆನಂದ್ ಸಿ ಕಲ್ಲೋಲಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್ ಹಾಗೂ ನಗರಸಭೆಯ ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.