SSLC ಫಲಿತಾಂಶ’ ಪ್ರಕಟಗೊಳ್ಳುವವರೆಗೆ ‘ಪ್ರಥಮ PUC’ಗೆ ದಾಖಲಾತಿ ಆರಂಭಿಸುವಂತಿಲ್ಲ ಖಡಕ್ ಆದೇಶ

ಬೆಂಗಳೂರು : ರಾಜ್ಯದಲ್ಲಿ 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳನ್ನು 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ನಂತ್ರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದಾಖಲಾತಿ ಮಾರ್ಗಸೂಚಿ ಬಿಡುಗಡೆ ಮಾಡಿದ ನಂತ್ರ ಪ್ರಾರಂಭಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಖಡಕ್ ಆಗಿ ಆದೇಶಿಸಿದೆ.
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿದ್ದು, 2021-22ನೇ ಸಾಲಿನ ಪ್ರಥಮ ಪಿಯುಸಿ ತರಗತಿಗೆ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು 2020-21ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಂದ ನಂತ್ರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯು ದಾಖಲಾತಿ ಮಾರ್ಗಸೂಚಿ-2021-22 ಬಿಡುಗಡೆ ಮಾಡಿದ ನಂತ್ರವೇ ಮಾಡಿಕೊಳ್ಳಲು ತಿಳಿಸಿದೆ. ಅಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ನೀಡುವಂತಿಲ್ಲ ಹಾಗೂ ಆನ್ ಲೈನ್ ತರಗತಿಗಳನ್ನು ಸಹ ನಡೆಸುವಂತಿಲ್ಲ ಎಂದು ತಿಳಿಸಿದ್ದಾರೆ.
ಆದಾಗ್ಯೂ ಯಾವುದೇ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿಗಳು ನಡೆಸಿದ ಬಗ್ಗೆ ಹಾಗೂ ಆನ್ ಲೈನ್ ತರಗತಿಗಳು ನಡೆಯುತ್ತಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಲ್ಲಿ, ಸಂಬಂಧಿಸಿದ ಕಾಲೇಜುಗಳ ಮೇಲೆ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಆ ಕಾಲೇಜುಗಳ ಮಾನ್ಯತೆ ರದ್ದು ಪಡಿಸಲು ಕ್ರಮವಹಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದೆ.