ಕರಾವಳಿ

ಪೂರ್ಣಗೊಂಡಿರುವ ರಸ್ತೆ ಕಾಮಗಾರಿಗೆ ಮತ್ತೆ ಟೆಂಡರ್ ಆರೋಪ; ಉಡುಪಿ ನಗರಸಭೆಯ ವಿರುದ್ಧ ಜಿಲ್ಲಾಧಿಕಾರಿಗೆ ಕಾಂಗ್ರೆಸ್ ದೂರು

ಉಡುಪಿ‌ ನಗರಸಭೆ ವ್ಯಾಪ್ತಿಯಲ್ಲಿ‌ ಈಗಾಗಲೇ ಸಂಪೂರ್ಣಗೊಂಡಿರುವ ಲಕ್ಷಾಂತರ ರೂ. ರಸ್ತೆ ಕಾಮಗಾರಿಗೆ ನಗರಸಭೆ ಮತ್ತೊಮ್ಮೆ ಟೆಂಡರ್ ಕರೆದಿದೆ. ಇದಕ್ಕೆ ಕೂಡಲೇ ತಡೆಯಾಜ್ಞೆ ನೀಡಿ, ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಮುಖಂಡರು ಸಲ್ಲಿಸಿದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವೀಕರಿಸಿದರು.

ಉಡುಪಿ ನಗರಸಭೆಯು ಜ.29ರಂದು 17 ಕಾಮಗಾರಿಗಳಿಗೆ ಟೆಂಡರ್ ಪ್ರಕಟಣೆ ಹೊರಡಿಸಿದ್ದು, ಆ ಪೈಕಿ ಕುಂಜಿಬೆಟ್ಟು ಶಾರದ ನಗರ ರಸ್ತೆಯಿಂದ ಸೇತುವೆ ತನಕ ರೂ. 15 ಲಕ್ಷ ಮೊತ್ತದ ರಸ್ತೆ ಡಾಮಾರೀಕರಣ ಕಾಮಗಾರಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.. ಈ ಕಾಮಗಾರಿ ಮಾತ್ರವಲ್ಲದೇ ಇನ್ನೂ ಅನೇಕ ಕಾಮಗಾರಿಗಳನ್ನು ಸರಕಾರದ ಕಾನೂನು ನಿಯಮಗಳು ಸುತ್ತೋಲೆಗಳನ್ನು ಗಾಳಿಗೆ ತೂರಿ ಈಗಾಗಲೇ ಪೂರ್ಣಗೊಳಿಸಿದೆ. ಈ ಟೆಂಡರ್ ಫೆ. 15 ರOದು ತೆರೆಯಲಿದ್ದು, ಅದರ ಮೊದಲೇ ಟೆಂಡರ್ ಪ್ರಕ್ರಿಯೆಯ ನಿಯಮವನ್ನು ಉಲ್ಲಂಘನೆ ಮಾಡಿ ಕಾಮಗಾರಿ ಪೂರ್ತಿಗೊಳಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗೆ ಟೆಂಡರ್ ಆಹ್ವಾನಿಸುವುದು ಕಾನೂನು ಬಾಹಿರವಾಗಿದ್ದು, ಅದರಲ್ಲಿ ಅವ್ಯವಹಾರ ಆಗಿರುವ ಶಂಕೆ ಇದೆ. ಹಾಗಾಗಿ ಉಡುಪಿ ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು, ನಗರಸಭೆಯ ಹಾಗೂ ಆಡಳಿತ ಪಕ್ಷದ ಸದಸ್ಯರೊಂದಿಗೆ ಶಾಮಿಲಾಗಿ ಈ ಬೃಹತ್ ಅವ್ಯವಹಾರ ನಡೆಸಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ದೂರಿದ್ದಾರೆ.

ಹೊರಡಿಸಿರುವ ಟೆಂಡರ್ ಪ್ರಕಟಣೆಯಲ್ಲಿ ನೀಡಿರುವ ಪ್ರತಿಯೊಂದು ಕಾಮಗಾರಿಯನ್ನು ಪರಿಶೀಲಿಸಿ ಈಗಾಗಲೇ ನಿರ್ವಹಿಸಿರುವ ಕಾಮಗಾರಿಗಳನ್ನು ಕೈಬಿಡಬೇಕು‌. ಅಲ್ಲದೆ, ಮುಂದಿನ ಟೆಂಡರ್ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನಗರಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್, ದೂರು‌ದಾರರಾದ ಯತೀಶ್ ಕರ್ಕೇರಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನಗರ ಸಭೆಯ ಮಾಜಿ ಉಪಾಧ್ಯಕ್ಷ ಕುಶಾಲ್ ಶೆಟ್ಟಿ, ಮುಖಂಡರಾದ ಅಮೃತ್ ಶೆಣೈ, ಜ್ಯೋತಿ ಹೆಬ್ಬಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಶಶಿರಾಜ್ ಕುಂದರ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!