ಕರಾವಳಿ

ಉಡುಪಿ ಜಿಲ್ಲೆಯ ಜನರೊಂದಿಗೆ ನಿಲ್ಲಬೇಕಾದ ಉಸ್ತುವಾರಿ ಸಚಿವ ಬೊಮ್ಮಾಯಿ ಜಿಲ್ಲೆಯ ಜನರನ್ನು ಅನಾಥರನ್ನಾಗಿಸಿದ್ದಾರೆ: ಯುವ ಕಾಂಗ್ರೆಸ್ ಆರೋಪ

ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಿದ್ದು ಒರ್ವ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಸವರಾಜ ಬೊಮ್ಮಾಯಿಯವರು ಜಿಲ್ಲೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕೋವಿಡ್ -19 ಲಾಕ್ ಡೌನ್ ಬಳಿಕ ಸತತ 4 ತಿಂಗಳ ಅವಧಿಯಲ್ಲಿ ಕೇವಲ 2 ಬಾರಿ ಜಿಲ್ಲೆಗೆ ಆಗಮಿಸಿರುವುದು ಜಿಲ್ಲಾ ಉಸ್ತುವಾರಿ ಸಚಿವರ ದೊಡ್ಡ ವೈಫಲ್ಯವಾಗಿದೆ.

https://youtu.be/wFvUJGSOEi8

ಜಿಲ್ಲೆಯಲ್ಲಿ ಚುನಾಯಿತ ಶಾಸಕರಿದ್ದರೂ ಕೂಡ ಹೊರ ಜಿಲ್ಲೆಯವರಿಗೆ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು ಸರಕಾರದ ಮೊದಲ ತಪ್ಪು. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಸದ್ಯ ರಾಜ್ಯದ ಗೃಹ ಸಚಿವರೂ ಕೂಡ ಆಗಿರುವುದರಿಂದ ಜಿಲ್ಲೆಯ ಬಗ್ಗೆ ಗಮನ ಹರಿಸುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಹೇಳಿಕೊಂಡು ಬಂದಿತ್ತು. ಅದಕ್ಕೆ ಉತ್ತಮ ಉದಾಹರಣೆ ಎಂಬಂತೆ ಕೊರೋನಾದ ಸಂಕಷ್ಠ ಸಮಯದಲ್ಲಿ ಜಿಲ್ಲೆಯ ಜನರೊಂದಿಗೆ ನಿಲ್ಲಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಯನ್ನು ಅನಾಥರನ್ನಾಗಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 3000 ಗಡಿ ದಾಟಿದ್ದು ಇದರ ನಿಯಂತ್ರಣ ಹಾಗೂ ಅದರ ಸಂಬಂಧ ತೆಗೆದುಕೊಂಡ ಮುಂಜಾಗೃತಾ ಕ್ರಮಗಳ ಬಗ್ಗೆ ಒಂದೆರೆಡು ಬಾರಿ ಜಿಲ್ಲೆಗೆ ಆಗಮಿಸಿದ್ದು ಬಿಟ್ಟರೆ ಬೇರೆನೂ ಕೆಲಸ ನಡೆದಿಲ್ಲ.

ಈ ಹಿಂದೆ ಸಮ್ಮಿಶ್ರ ಸರಕಾರವಿದ್ದಾಗ ಸಚಿವೆ ಜಯಮಾಲ ಉಸ್ತುವಾರಿ ಸಚಿವರಾಗಿದ್ದರೂ ಕೂಡ ತಿಂಗಳಿಗೆ ಒಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆದರೆ ಪ್ರಸ್ತುತ ಉಸ್ತುವಾರಿ ಸಚಿವರು ಜಿಲ್ಲೆಯ ಯಾವುದೇ ಸಮಸ್ಯೆಗಳನ್ನು ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ.

ಜಿಲ್ಲೆಯಲ್ಲಿ ಒಂದರ ಮೇಲೊಂದು ಹಗರಣಗಳು ನಡೆದರೂ ಕೂಡ ಯಾವುದಕ್ಕೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ತೋರದೆ ನಿರ್ಲಕ್ಷ್ಯತನ ತೋರುತ್ತಿರುವುದು ಖಂಡನೀಯವಾಗಿದೆ. ಕೋವಿಡ್ -19 ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸನ್ನು ಸಂಪೂರ್ಣ ಮರೆತಿದ್ದು ಯಾವುದೇ ಸರ್ವಪಕ್ಷ ಸಭೆ ನಡೆಸದೆ ಎಲ್ಲಾ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿರುವುದು ಸರಿಯಲ್ಲ. ಇನ್ನಾದರೂ ಉಸ್ತುವಾರಿ ಸಚಿವರು ಎಚ್ಚೆತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!