
ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಆರೋಪದ ಮೇಲೆ ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಸಿಐಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ವಿಭಾಗದಲ್ಲಿ ಸ್ಥಳೀಯ ಖಾಸಗಿ ಕಾಮಗಾರಿ ನಡೆಯುತ್ತಿದ್ದಲ್ಲಿ ಸ್ಥಳದಲ್ಲಿ ಅಪರಿಚಿತನೋರ್ವನು ಅನುಮಾನಾಸ್ಪದವಾಗಿ ತಿರುಗುತ್ತಿದ್ದ. ಈ ಸಂದರ್ಭ ಆತನನ್ನು ವಿಚಾರಿಸಿದಾಗ ತನ್ನ ಹೆಸರು ರಾಕೇಶ್ ಪಶ್ಚಿಮ ಬಂಗಾಳ ರಾಜ್ಯದ ಮುರ್ಸಿದಾಬಾದ್ ನವನು ಎಂದು ತಿಳಿಸಿದ್ದಾನೆ. ‘ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು, ಲಾರಿ ಡ್ರೈವರ್ ಓರ್ವ ತನ್ನನ್ನು ಸಂಬಳ ನೀಡದೆ ಇಲ್ಲೆ ಬಿಟ್ಟು ಹೋಗಿದ್ದು, ದಾರಿ ಕಾಣದೇ ವಿಮಾನ ನಿಲ್ದಾಣ ಎಂದು ತಿಳಿಯದೇ ಈ ಭಾಗಕ್ಕೆ ಬಂದಿರುತ್ತೇನೆ’ ಎಂದು ತಿಳಿಸಿದ್ದಾನೆ.
ಈತ ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿರುತ್ತಾನೆ ಎಂದು ಸಿಐಎಸ್ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ
ಘಟನೆಯಿಂದ ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಹಾಗೂ ಅಧಿಕಾರಿಗಳಲ್ಲಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣ ವಾಗಿತ್ತು.