
ಮನುಷ್ಯನ ಪ್ರತಿಯೊಂದು ಕ್ಷಣ ನಂಬಿಕೆ ಮೇಲೆ ಆಧಾರದ ಮೇಲೆ ಇರುತ್ತೆ. ನಾ ಯಾವ ಕ್ಷಣಕ್ಕೆ ಸಾಯುವೆ ಎಂದು ಖಂಡಿತವಾಗಿ ಗೊತ್ತಿಲ್ಲ ಆದರೆ ನಾಳೆಯ ಜೀವನದ ಬಗ್ಗೆ ಕನಸು ಕಾಣುವೆ ಕಾರಣ ನಾಳೆಯವರೆಗು ನಾ ಬದುಕುವೆ ಎನ್ನುವ ನಂಬಿಕೆ . ಹೀಗೆ ಹಲವು ರೀತಿಯಲ್ಲಿ ಇರುತ್ತೆ ಈಗ ಈ ಮಾತು ಯಾಕೆ ಅಂದ್ರೆ ದೇವರ ಇರುವಿಕೆಯ ಬಗ್ಗೆ ಸಾವಿರಾರು ವರ್ಷಗಳಿಂದ ಸಂದೇಹ ಪಟ್ಟ ಮಂದಿ ಸಿಗುವರು. ಕೆಲವರು ದೇವರಿದ್ದಾನೆ ಎಂದು ನಂಬುವರು . ಇನ್ನೂ ಕೆಲವರು ಇಲ್ಲ ಎಂದು ಹೇಳುವರು. ಅದೆನೆ ಇರಲಿ ಇಲ್ಲ ಅಂತ ಹೇಳುವಲ್ಲಿ ಏನು ಲಾಭವಿದೆ ಅಂತ ಗೊತ್ತಿಲ್ಲ. ದೇವರಿದ್ದಾನೆ ಎಂದು ನಂಬುವುದರಲ್ಲಿ ಮಾತ್ರ ಪ್ರಯೋಜನವಿದೆ.
ಸಾವಿರ ಸಾವಿರ ವರ್ಷಗಳಿಂದಲೂ ಎಲ್ಲಾ ಮತದವರು ಎಲ್ಲಾ ದೇಶದವರು ದೇವರನ್ನು ನಂಬುವರು. ಒಮ್ಮೆ ಎಲ್ಲೂ ಓದಿದ ನೆನಪು ಕೆಲ ದೇಶಗಳಲ್ಲಿ ದೇವರಿಲ್ಲ ಎಂದು ಪ್ರಚಾರ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ಆಗುತ್ತೆ ಅಂತ ನನ್ನ ಪ್ರಕಾರ ಮುಸ್ಲಿಂ ರಾಷ್ಟ್ರಗಳಲ್ಲಿ ಅನಿಸುತ್ತದೆ.
ಕೆಲ ಮತಗಳಲ್ಲಿ ದೇವರು ಒಬ್ಬನೆ ಎಂದು ಪ್ರಚಾರ ಮಾಡುವರು ನಂತರ ನೋಡಿದ್ರೆ ನೀರು ಗಾಳಿ ಬೆಳಕು ಪಂಚ ಭೂತಗಳಿಗೆ ಕೂಡ ದೇವರ ಸ್ಥನ ಕಲ್ಪಿಸುವರು ಮತ್ತೆ ಏಲ್ಲಿ ಹೋಯ್ತು ಏಕದೇವ ಸಿದ್ದಾಂತ?
ಪರಮತದ ಚಿಂತೆ ಬಿಡಿ ನಮ್ಮ ಕಡೆ ನೋಡಿ ಅಂತ ಬೈಬೇಡಿ ಇಲ್ಲಿಗೆ ಬಂದೆ. ಹಾ ನಿಜ ನಮ್ಮಲ್ಲಿ ದೇವರುಗಳ ಸಂಖ್ಯೆ ತುಂಬಾ ದೊಡ್ಡದು .
ಆ ಸಂಖ್ಯೆನಿಂದ ತುಂಬಾ ಜಾತಿ ಮತ್ತು ಪದ್ದತಿಗಳ ಉಗಮವಾಯಿತು ಬಟ್ಟೆ ನೇಯ್ಗೆ ಮಾಡುವರಿಗೆ ಒಂದು ದೇವರು ಕುಲುಮೆ ವೃತ್ತಿ ಮಾಡುವರಿಗೆ ಒಂದು ಅವರಿಗೆ ಇವರಿಗೆ ಅಂತ ಲೆಕ್ಕವಿಲ್ಲದಷ್ಟು ನಾವೆ ಸೃಷ್ಟಿ ಮಾಡಿಕೊಂಡು ಅದಕ್ಕೊಂದು ಮಠ ಅಲ್ಲಿ ಒಬ್ಬರು ಸ್ವಾಮುಗಳು ಅಂತ ಮಾಡಿಕೊಂಡೆವು. ಆದರು ನಮ್ಮಲ್ಲಿ ಒಗ್ಗಟ್ಟು ಮುರಿಬಾರದು ಎಂದು ಪ್ರತಿಯೊಂದು ಜಾತಿಯೊಂದಿಗೆ ವ್ಯವಹಾರ ಮಾಡಿಕೊಂಡು ಅಗತ್ಯ ವಸ್ತುಗಳಿಗೆ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಬದುಕುವ ದಾರಿ ನಿರ್ಮಾಣ ಮಾಡಿಕೊಟ್ಟಿದ್ದರು ನಮ್ಮ ಹಿರಿಯರು .
ಅದು ಇರಲಿ ಹೀಗೆ ಜಾತಿಗೊಂದು ದೇವರ ಆಲಯ ನಿರ್ಮಾಣ ಮಾಡಿ ಅವರ ಆಡಂಬರ ಮತ್ತು ವೈಶಿಷ್ಟ್ಯಗಳನ್ನು ತಿಳಿಸಲು ಪರಿ ಪರಿ ಕಥೆಗಳನ್ನು ಸೃಷ್ಟಿ ಮಾಡಿದರು ಇಲ್ಲಿ ಹಾಗೆ ಇಗೆ ಅಂತ . ಮುಗ್ದ ಮಕ್ಕಳನ್ನು ದೇವರಿಗೆ ಬಿಡುವುದು ಕುರಿ ಕೋಳಿ ಜಂತು ಬಲಿ. ಹೀಗೆ ಹಲವು ವಿಚಿತ್ರ ಆಚರಣೆಗಳನ್ನು ತಳುಕು ಹಾಕಿ ಅದಕ್ಕೆ ಆ ದೇವರ ಹೆಸರನ್ನು ಬಳೆದರು ಇದು ಮಾತ್ರ ಭಯಂಕರ ಮಾಯಾ ಜಾಲ.
ದೇವರ ಹೆಸರಿನಲ್ಲಿ ನಡೆಯುವ ಆಡಂಬರದ ಪೂಜೆಗಳು ಅನಾವಶ್ಯಕ ವ್ಯಯಗಳು. ಅದರಲ್ಲು ಸಾಲ ಮಾಡಿ ಮಾಡುವ ಹಬ್ಬ ಹರಿದಿನಗಳು ವ್ಯರ್ಥ. ಗೀತೆಯಲ್ಲಿ ಕೃಷ್ಣ ಒಂದು ವಾಕ್ಯ ಹೇಳುವರು.
“ಯೋನಹೃಷ್ಯತಿ ನದ್ವೇಷ್ಟಿ ನ ಶೋಚತಿ ನಕಾಂಕ್ಷತಿ|
ಶುಭಾಶುಭ ಪರಿತ್ಯಾಗಿ ಭಕ್ತಿಮಾನ್ ಯಃ ಸಮೇಪ್ರಿಯ್ವ್ಃ||
ಅರ್ಥ : ಸುಖದುಃಖಗಳನ್ನು ಸಮಭಾವನೆಯಿಂದ ನೋಡುವವನು.ದುಃಖಿಸದವನು ಆಶೆಗಳು ಇಲ್ಲದವನು, ಶುಭಾಶುಭಗಳ ಬಗ್ಗೆ ಯೋಚನೆಮಾಡದವನು,ಸಮಚಿತ್ತನಾದವನೇ ಭಗವಂತನ ನಿಜವಾದ ಭಕ್ತ.
ಪರಮಾತ್ಮ ಪರಮಭಕ್ತರಿಗೆ ದಾಸನಾಗುತ್ತನೆ ಎನ್ನುವ ಹಲವು ಕಥೆಗಳನ್ನು ನಾವು ಕೇಳಿದ್ದೆವೆ ಬಾಣಾಸುರನ ಮನೆಕಾಯ್ದವನು ಪರಮೇಶ್ವರ. ರಾವಣನ ಭಕ್ತಿಗೆ ಸತಿಯನ್ನು ದಾನಮಾಡಿದವ ಪಾರ್ವತಿ ಪತಿ. ಮೊದಲು ನಾವು ಭಗವಂತನಿಗೆ ದಾಸರಾದರೆ ಅವನು ನಮಗೆ ದಾಸನಂತೆ ಸೇವೆಯ ಮಾಡುವನು.
ಎಲ್ಲಿರವನು ಅವನು? ಎಲ್ಲಿ ಇಲ್ಲ ಅವನು! ಬಡವನ ಮನೆಯಲ್ಲಿ ಬದುಕುವ ಆಶಯನಾಗಿ ಇರುವನು, ಅಸಹಾಯಕನ ರಕ್ಷಣೆಗೆ ಸಹಾಯಕನಂತೆ ಬರುವನು. ಮಾಡುವ ಸುಳ್ಳು ಆಣೆ ಪ್ರಮಾಣಗಳಲ್ಲಿ ಅವನಿಲ್ಲ ನಾವು ಅರ್ಪಿಸುವ ನೂರಾರು ತೆಂಗಿನಕಾಯಿಗಳಿಗೆ. ನೂರರ ಸಾವಿರದ ನೋಟಿನ ಕಂತೆಗಳಿಗೆ ಅವನು ಕಾಯ್ದು ನಿಂತಿಲ್ಲ. ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿಗೆ ಆಣೆ ಮಾಡುವ ಅವಶ್ಯಕತೆ ಇರುವುದಿಲ್ಲ. ಮಾಡುವ ಕಾಯಕದಲ್ಲಿ ನಿಷ್ಠೆ ಇಲ್ಲದೆ ಅಪನಂಬಿಕೆಯಿಂದ ಇರುವನಿಗೆ ಬೇಕು ಆಣೆ ಪ್ರಮಾಣದ ಆಸರೆ ಅದು ಕೇವಲ ಅವನ ದುರ್ಬಲ ಮನ ಸ್ಥಿತಿಯನ್ನು ತೋರಿಸುತ್ತೆ . ಯಾವ ದೇವರು ನನ್ನ ಮೇಲೆ ಆಣೆ ಮಾಡಿ ಎಂದು ಹೇಳಿಲ್ಲ ಅವನು ಸಾಕ್ಷಿಯಾಗಿ ನಿಲ್ಲಲು.
ದೇವರು ಎಂದರೆ ಒಂದು ನಂಬಿಕೆ! ದೇವರೆಂದರೆ ಒಂದು ಭರವಸೆ! ವಿಶ್ವಾಸ! ಭರವಸೆ ನಮ್ಮಲ್ಲಿ ಶಕ್ತಿಯನ್ನು ತುಂಬುತ್ತದೆ ಮುನ್ನಡೆಯುವಂತೆ ಮಾಡುತ್ತದೆ. ನಂಬಿಕೆಯಲ್ಲಿ ಇರುವ ಶಕ್ತಿ ಯಾವುದರಲ್ಲಿಯು ಇಲ್ಲ.
ದೇವರು ಎಂದರೆ ಎಲ್ಲೊ ಕಲ್ಲಿನ ಶಿಲೆಯಲ್ಲಿ ಬಣ್ಣದ ಪಟಗಳಲ್ಲಿ ಇಲ್ಲ. ಸತ್ಯವೇ ಅವನ ಪ್ರತಿರೂಪ. ಧರ್ಮವೆ ಅವನ ರೂಪ, ನೀತಿಯೆ ಅವನ ರೂಪ, ನ್ಯಾಯವೆ ಅವನ ರೂಪ, ನಿಯಮವೆ ಅವನ ರೂಪ, ಕೃಷಿಯೆ ಅವನ ಮಂತ್ರ, ನಿಷ್ಠೆಯೆ ಅವನ ಪೂಜೆ.
ಮಾಡುವ ಕಾಯಕದಲ್ಲಿ ಧರ್ಮದಲ್ಲಿ ನಂಬಿಕೆ ವಿಶ್ವಾಸ ಇರಬೇಕು. ಅವನು ಸದಾಕಾಲವೂ ನಮ್ಮೊಂದಿಗೆ ಇರುವನು ತಾಯಿ ತಂದೆ ಸಖ ಸಖಿ ಹೀಗೆ ಹಲವಾರು ರೀತಿಯಲ್ಲಿ ನಮ್ಮ ಆಪತ್ಕಾಲದಲ್ಲಿ ಕೈ ಹಿಡಿಯುವನು ಮುನ್ನಡೆಸುವನು. ಅವನಲ್ಲಿ ನಂಬಿಕೆ ಇಡಬೇಕು ಹೊರತು ಮನುಷ್ಯನ ಹಣದ ಆಸೆಗೆ ಹುಟ್ಟಿಕೊಂಡ ಆಣೆ ಪ್ರಮಾಣದಲ್ಲಿ ಅಲ್ಲ.