
ಮಂಗಳೂರು : ಕೋವಿಡ್ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಳಾಯಿ ಸಮೀಪದ ಚಿತ್ರಾಪುರದಲ್ಲಿ ನಡೆದಿದೆ. ಚಿತ್ರಾಪುರದ ರೆಹೆಜಾ ಅಪಾರ್ಟ್‍ಮೆಂಟ್‍ನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಪಡುಬಿದ್ರಿ ನಿವಾಸಿಗಳಾದ ಆರ್ಯ ಸುವರ್ಣ ಮತ್ತು ಗುಣ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳಾಗಿದ್ದಾರೆ.
ಕಳೆದ ಒಂದು ವಾರದಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ದಂಪತಿ, ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆ ಎಂದು ಮಾಹಿತಿ ದೊರಕಿದೆ. ಆತ್ಮಹತ್ಯೆ ಮಾಡುವ ಮುನ್ನ ದಂಪತಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಶಶಿಕುಮಾರ್ ಅವರು ಕೂಡಲೇ ಕಾರ್ಯ ಪೃವೃತ್ತರಾಗಿ ಸ್ಥಳಕ್ಕೆ ಪೊಲೀಸ್ ಪಡೆ ಕಳುಹಿಸಿದರೂ ಅದಾಗಲೇ ದಂಪತಿ ನೇಣಿಗೆ ಶರಣಾಗಿದ್ದರು.
ದಂಪತಿ ಹಿಂದೂ ಸಂಘಟನೆ ಮುಖಂಡರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಶರಣ್ ಪಂಪ್ ವೆಲ್, ಸತ್ಯಜಿತ್ ಸುರತ್ಕಲ್ ರವರಿಗೂ ವಾಯ್ಸ್ ಮೆಸೇಜ್ ಕಳುಹಿಸಿ ಅಂತ್ಯಕ್ರಿಯೆಯನ್ನು ಮಾಡುವಂತೆ ಕೇಳಿಕೊಂಡಿದ್ದಾರೆ. ಪತ್ನಿ ಗುಣ ಸುವರ್ಣ ಡೆತ್ ನೋಟ್ ಬರೆದಿದ್ದಾರೆ.
ಡೆತ್ ನೋಟ್ ನಲ್ಲಿ ‘ಬ್ಲ್ಯಾಕ್ ಫಂಗಸ್ ನಿಂದ ಕಣ್ಣು ಹಾಗೂ ಇತರ ಅಂಗಾಂಗಗಳನ್ನು ಕಳೆದುಕೊಂಡಿದ್ದನ್ನು ನೋಡಿದಾಗ, ನನ್ನ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನನಗೂ ಭಯ ಕಾಡುತ್ತಿದೆ. ನನ್ನ ಗಂಡನಿಗೂ ಮೂರು ದಿನದಿಂದ ಕೋವಿಡ್ ಲಕ್ಷಣಗಳು ಕಾಣಿಸಿದ್ದು, ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಬಂದಿದ್ದೇವೆ. ಆದ ಕಾರಣ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನನ್ನ ತಂದೆ ತಾಯಿ ತಮ್ಮನಿಗೆ ಕೋವಿಡ್ ಸೋಂಕು ತಾಗಿ ಈಗ ಚೇತರಿಸಿಕೊಂಡಿದ್ದಾರೆ. ತಾಯಿ ತುಂಬಾ ಕಷ್ಟದಿಂದ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಅಂತ್ಯಕ್ರಿಯೆಯ ತೊಂದರೆ ಕೊಡಬಾರದು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. ನನಗೆ 2 ಸಲ ಸಿಸೇರಿಯನ್ ಆಗಿ ಮಕ್ಕಳ ಸಮಸ್ಯೆ ಆದುದರಿಂದ ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಿರುತ್ತಾರೆ. ಅದಕ್ಕಾಗಿ ನಾನು ಯಾರೊಂದಿಗೂ ಬೆರೆಯಲು ಇಷ್ಟಪಡುವುದಿಲ್ಲ. ನಾನು ಮತ್ತು ಗಂಡ ನಿರ್ಧರಿಸಿದ ಪ್ರಕಾರ ಹಿಂದೂ ಸಂಘಟನೆಯ ಶರಣ್ ಪಂಪ್ ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರು ನಮ್ಮ ಅಂತ್ಯಕ್ರಿಯೆಯನ್ನು ನಡೆಸಬೇಕು. ಅದಕ್ಕಾಗಿ ಒಂದು ಲಕ್ಷ ರೂ. ಇಟ್ಟಿದ್ದೇವೆ. ನಮ್ಮ ಈ ಮನೆಯಲ್ಲಿರುವ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡುತ್ತೇವೆ ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.