
ಕಾರವಾರ: ರಸ್ತೆ ವ್ಯವಸ್ಥೆ ಇಲ್ಲದ್ದರಿಂದ ರೋಗಿಯನ್ನು 5 ಕಿಲೋಮೀಟರ್ ದೂರ ಜೋಲಿಯಲ್ಲೇ ಹೊತ್ತೊಯ್ದು ಆಸ್ಪತ್ರೆ ಸೇರಿಸಿರುವ ಮನಕಲಕುವ ಘಟನೆ ಅಂಕೋಲಾದಲ್ಲಿ ನಡೆದಿದೆ.ತಾಲೂಕಿನ ವರೀಲಬೇಣಾ ಗ್ರಾಮದ 70 ವರ್ಷದ ನೂರಾ ಪೊಕ್ಕ ಗೌಡ ಎಂಬುವವರು ನಿನ್ನೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಾಗಿದ್ದು ವರೀಲಬೇಣಾ ಕುಗ್ರಾಮವಾದ್ದರಿಂದ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಐದು ಕಿಲೋಮೀಟರ್ ದೂರದ ಅಂಕೋಲಾ ಪಟ್ಟಣಕ್ಕೆ ಕುರ್ಚಿಯಲ್ಲಿ ಕೂರಿಸಿ ಕಾಡಿನ ದಟ್ಟ ಹಾದಿಯಲ್ಲಿ ಕುಟುಂಬದವರು ಜೋಲಿಮಾಡಿ ಕರೆತಂದಿದ್ದಾರೆ.
ಗುಡ್ಡಗಾಡು ಪ್ರದೇಶವಾದ್ದರಿಂದ ಆಂಬ್ಯುಲೆನ್ಸ್ ಬರುವುದು ಸಹ ಸಾಧ್ಯವಿಲ್ಲದ್ದರಿಂದ ಹೊತ್ತೊಯ್ಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ಸಹ ರಸ್ತೆಗಳು ಸಮರ್ಪಕವಾಗಿ ಇಲ್ಲದ ಕಾರಣ ಆಂಬ್ಯುಲೆನ್ಸ್ ಬರುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಇದ್ದು ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವ ಕೆಲಸ ಮಾಡಬೇಕಾಗಿದೆ ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.