
ಮಂಗಳೂರು: ಮಾಸ್ಕ್ ಧರಿಸದೇ ಕ್ರಿಕೆಟ್ ಆಡುತ್ತಿದ್ದವರನ್ನು ಪ್ರಶ್ನಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರ ಮೇಲೆ ಇಬ್ಬರು ಪುಂಡರು ಹಲ್ಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಬದ್ರಿಯಾನಗರದಲ್ಲಿ ಮಂಗಳವಾರ ( ಮೇ.25) ನಡೆದಿದೆ. ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ರಾಜೇಂದ್ರ ಶೆಟ್ಟಿ ಅವರ ಮೇಲೆ ಹಲ್ಲೆ ನಡೆದಿದೆ.
ಬದ್ರಿಯಾನಗರ ಮೈದಾನದಲ್ಲಿ ಮಾಸ್ಕ್ ಹಾಕದೆ ಆಟವಾಡುತ್ತಿದ್ದವರನ್ನು ಗಮನಿಸಿದ ಪಿಡಿಒ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸದಿದ್ದನ್ನು ಪ್ರಶ್ನಿಸಿದ್ದಾರೆ. ಯುವಕರಿಗೆ ಮಾಸ್ಕ್ ಹಾಕುವಂತೆ ಸೂಚಿಸಿದ್ದಾರೆ. ಮಾಸ್ಕ್ ಹಾಕದೇ ಗುಂಪು ಸೇರಿದ್ದನ್ನು ಪ್ರಶ್ನಿಸಿ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಕ್ರಿಕೆಟ್ ಆಡುತ್ತಿದ್ದವರ ಇಬ್ಬರು ಪುದುಗ್ರಾಮದ ಕುಂಪಲ ಮಜಲು ನಿವಾಸಿಗಳು ಪಿಡಿಒ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಮ್ಮದ್ ಇದಾಯುತುಲ್ಲಾ ಹಾಗೂ ಅಹ್ಮದ ಬಸೀರ್ ಹಲ್ಲೆ ನಡೆಸಿದ ಆರೋಪಿಗಳು. ಈ ಘಟನೆಯ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.