
ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗಳಿಗೆ ವೇತನ ಪಾವತಿಸದೇ ಇರುವ ಬಗ್ಗೆ ಸಿಬ್ಬಂದಿಗಳು ಮತ್ತೆ ಮುಷ್ಕರ ಆರಂಭಿಸಿದ್ದು, ದಿನಾಂಕ 19-08-2021 ರಂದು ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಮುಷ್ಕರ ನಿರತ ಸಿಬ್ಬಂದಿಯವರೊಂದಿಗೆ ಮಾತುಕತೆ ನಡೆಸಿ ವೇತನ ಪಾವತಿಸುವ ಭರವಸೆ ನೀಡಿರುವುದರಿಂದ ಮುಷ್ಕರ ಕೈಬಿಟ್ಟು ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ದಿನಾಂಕ 20-08-2021ರಂದು ಮಧ್ಯಾಹ್ನ 12.00 ಗಂಟೆಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಸಭೆ ನಡೆಸಿ ವೇತನ ಪಾವತಿಸುವ ತೀರ್ಮಾನ ಕೈಗೊಳ್ಳಲಾಗುವುದು.
ಈಗಾಗಲೇ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲಾ ವಿಭಾಗದ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನ ಪಾವತಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸುವರ್ಣ ಆರೋಗ್ಯ ಟ್ರಸ್ಟ್ ನಿಂದ ರೂ. 50.00 ಲಕ್ಷ ಬಿಡುಗಡೆಗೊಳಿಸಲಾಗಿದೆ. ಆಸ್ಪತ್ರೆಯ ಎಲ್ಲಾ ವಿಭಾಗದ ಸಿಬ್ಬಂದಿಗಳಿಗೆ ವೇತನ ಪಾವತಿಸುವ ನಿರ್ಭಂದದೊಂದಿಗೆ ಅಧಿಕಾರಿಗಳಿಗೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾll ಮಧುಸೂದನ್ ನಾಯಕ್ ರೂ. 50.00 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿ ತಕ್ಷಣದಲ್ಲಿ ವೇತನ ಪಾವತಿಸಲು ಸೂಚಿಸಲಾಗಿತ್ತು. ಅದನ್ನು ಮೀರಿ ವೇತನ ಪಾವತಿಸದೇ ಇರುವುದರಿಂದ ಮತ್ತೆ ಈ ಸಮಸ್ಯೆ ಉಂಟಾಗಿದೆ.