
ಬೆಂಗಳೂರು, ಸೆ. 1: ಕರ್ನಾಟಕದ ಚರ್ಚ್ ಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ಸಲ್ಲಿಸಬೇಕು ಎಂಬ ಹೋರಾಟದ ರೂವಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕನ್ನಡ ಪಾದ್ರಿ ಕನಕಪುರದ ಹಾರೋಬೆಲೆಯ ಸ್ವಾಮಿ ಅಂತಪ್ಪ (91) ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಸಣ್ಣ ವಯಸ್ಸಿನಲ್ಲೇ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಸ್ವಾಮಿ ಅಂತಪ್ಪ ಅವರು ಜನಾನುರಾಗಿಗಳಾಗಿದ್ದರು. ಶಿಕ್ಷಕರಾಗಿಯೂ ಸೇವೆ ಸಲ್ಲಿಸಿರುವ ಅವರು ಅನೇಕ ಪ್ರತಿಭೆಗಳ ವಿಕಸನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶಿವಕುಮಾರ್ ಸ್ಮರಿಸಿಕೊಂಡಿದ್ದಾರೆ.
ಸ್ವಾಮಿ ಅಂತಪ್ಪ ಅವರು ರೋಮ್ ನ ಪ್ರತಿಷ್ಠಿತ ಗ್ರೆಗರಿಯನ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದ ಮೊದಲ ಕನ್ನಡಿಗರು. ಗ್ರೀಕ್, ರೋಮ್, ಆಂಗ್ಲ ಭಾಷೆಗಳಲ್ಲಿ ಮಾತ್ರವೇ ಲಭ್ಯವಿದ್ದ ಬೈಬಲ್ ಅನ್ನು ಬಹಳ ಹಿಂದೆಯೇ ಕನ್ನಡಕ್ಕೆ ಅನುವಾದ ಮಾಡಿದ ಹೆಗ್ಗಳಿಕೆ ಅಂತಪ್ಪ ಅವರದು. ಕರ್ನಾಟಕದ ನಾನಾ ಭಾಗಗಳಲ್ಲಿ ಕ್ರೈಸ್ತ ಧರ್ಮದ ಉಗಮ ಕುರಿತು ಅನೇಕ ಸಂಶೋಧನಾ ಕೃತಿಗಳನ್ನು ಅವರು ರಚಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜಾತಿ, ಧರ್ಮಗಳ ಎಲ್ಲೆ ಮೀರಿ ಇಡೀ ಸಮಾಜ ಮತ್ತು ಕನ್ನಡ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಅಂತಪ್ಪ ಅವರ ನಿಧನದಿಂದ ಬರೀ ಕ್ರೈಸ್ತ ಸಮುದಾಯಕ್ಕಷ್ಟೇ ಅಲ್ಲದೆ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಸಮುದಾಯ, ಬಂಧುಗಳು ಹಾಗೂ ಸಮಾಜಕ್ಕೆ ಭಗವಂತ ನೀಡಲಿ ಎಂದು ಡಿ.ಕೆ. ಶಿವಕುಮಾರ್ ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.