
ಮಂಗಳೂರು: ಮಂಗಳೂರಿನಲ್ಲಿ ಬೀಡಿ ಕೊಂಡೊಯ್ಯುತ್ತಿದ್ದ ಇಬ್ಬರು ಮಹಿಳೆಯರು ಮಂಗಳೂರಿನಿಂದ ಕೇರಳಕ್ಕೆ ಹೋಗುವ ರೈಲಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ.
ಸ್ಥಳೀಯ ನಿವಾಸಿಗಳಾದ ವಸಂತಿ(೫೦) ಮತ್ತು ಪ್ರೇಮಾ (೪೮) ಮೃತಪಟ್ಟವರು.
ಸ್ಥಳೀಯರ ಮಾಹಿತಿ ಪ್ರಕಾರ, ರೈಲ್ವೇ ಹಳಿ ಮೇಲೆ ನಡೆಯುತ್ತಿದ್ದ ಸಮಯ ರೈಲು ಬಂತೆಂದು ಈ ಇಬ್ಬರು ಮಹಿಳೆಯರು ಬದಿಗೆ ಸರಿಯಲು ಮುಂದಾಗಿದ್ದಾರೆ. ಆದರೆ ಇವರಲ್ಲಿ ಓರ್ವ ಮಹಿಳೆ ಆಯತಪ್ಪಿ ಹಳಿ ಮೇಲೆ ಬಿದ್ದಿದ್ದು ತಕ್ಷಣವೇ ಬದಿಗೆ ಸರಿಯಲು ಸಾಧ್ಯವಾಗಲಿಲ್ಲ. ಇದನ್ನ ಕಂಡು ಅವರ ಜೊತೆಗಿದ್ದ ಇನ್ನೋರ್ವ ಮಹಿಳೆ ಹಳಿ ಮೇಲೆ ಬಿದ್ದಿದ್ದ ಮಹಿಳೆಯ ರಕ್ಷಣೆಗಾಗಿ ಧಾವಿಸಿದ್ದಾರೆ ಎನ್ನಲಾಗಿದೆ. ಆದರೆ ಮಂಗಳೂರು ಜಂಕ್ಷನ್ ನಿಂದ ಕೇರಳ ಕಡೆ ತೆರಳುತ್ತಿದ್ದ ರೈಲು ಅವರಿಬ್ಬರ ಮೇಲೂ ಹರಿದಿದ್ದು ಸ್ಥಳದಲ್ಲೇ ಇಬ್ಬರೂ ಪ್ರಾಣ ತೆತ್ತಿದ್ದಾರೆ.
ಮೃತ ಮಹಿಳೆಯರಿಬ್ಬರು ಕುಡುಪ್ಪಾಡಿಯಿಂದ ಮಹಾಕಾಳಿಪಡ್ಪುವಿಗೆ ಬೀಡಿ ನೀಡಲೆಂದು ತೆರಳುತ್ತಿದ್ದರು ಎನ್ನಲಾಗಿದೆ. ನಗರದ ರೈಲ್ವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ