
ದೇಶದ ಪ್ರಮುಖ ವಿದ್ವಾಂಸರಲ್ಲಿ ಒಬ್ಬರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರು ಉಡುಪಿಯವರು. ತಮ್ಮ ಪ್ರವಚನಗಳಿಂದಲೇ ಮನೆ ಮಾತಾದ ಶ್ರೀಯುತರು ಬನ್ನಂಜೆ ಗೋವಿಂದಾಚಾರ್ಯ ಎಂದೇ ಗುರುತಿಸಿಕೊಂಡಿದ್ದು, ಮಾಧ್ವ ತತ್ವದಲ್ಲಿ ಅಮೋಘ ಪಾಂಡಿತ್ಯ ಹೊಂದಿದ್ದರು. ಕನ್ನಡ ಹಾಗೂ ಸಂಸ್ಕೃತದಲ್ಲೂ ಪಾಂಡಿತ್ಯ ಹೊಂದಿದ್ದ ಇವರು ಹಲವು ಕೃತಿಗಳನ್ನೂ ರಚಿಸಿದ್ದಾರೆ. ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬನ್ನಂಜೆ ಗೋವಿಂದಾಚಾರ್ಯರು ಸಾಹಿತಿ, ವಿದ್ವಾಂಸಕ, ಪತ್ರಕರ್ತ, ಸಂಶೋಧಕ, ಅನುವಾದಕ, ಭಾಷಾಂತರಕಾರ, ಭಾಷ್ಯಾಕಾರ, ಕವಿ, ಪ್ರವಚನಕಾರ, ಉಪನ್ಯಾಸಕ ಹೀಗೆ ಬಹುವಿಧವಾಗಿ ಅಮೂಲ್ಯ ವಾಙ್ಮಯ ಕೊಡುಗೆ ಧಾರೆಯೆರೆದು ಉಡುಪಿಗೆ ಕೀರ್ತಿ ತಂದ ಇವರ ಹೆಸರು ಉಡುಪಿ ಜಿಲ್ಲಾ ಗ್ರಂಥಾಲಯಕ್ಕೆ ಇಡುವುದು ಸೂಕ್ತ ಎಂದು ಶಾಸಕ ರಘುಪತಿ ಭಟ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂದು ದಿನಾಂಕ 27-08-2021 ರಂದು ಅಧಿಕಾರಿಗಳೊಂದಿಗೆ ಜಿಲ್ಲಾ ಗ್ರಂಥಾಲಯಕ್ಕೆ ಭೇಟಿ ನೀಡಿ ಚರ್ಚಿಸಿದ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಗ್ರಂಥಾಲಯದ ಒಂದು ಮಹಡಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಗ್ರಂಥಗಳನ್ನು, ಕೃತಿಗಳನ್ನು ಸಂಗ್ರಹಿಸಿ ಇಡುವುದು ಹಾಗೂ ಅವರ ಪ್ರವಚನಗಳ ಆಡಿಯೋ ವಿಷನ್ ಸಂಗ್ರಹಿಸಿ ಇಡುವ ಬಗ್ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್, ಉಡುಪಿ ನಗರ ಸಭೆಯ ಪೌರಾಯುಕ್ತರಾದ ಉದಯ್ ಶೆಟ್ಟಿ, ನಿರ್ಮಿತಿ ಕೇಂದ್ರದ ಅರುಣ್, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಹಾಗೂ ಸಾಮಾಜಿಕ ಕಾರ್ಯಕರ್ತ ವಾಸುದೇವ್ ಭಟ್ ಪೆರಂಪಳ್ಳಿ, ಬನ್ನಂಜೆ ಗೋವಿಂದಾಚಾರ್ಯರ ಪುತ್ರ ವಿನಯ ಭೂಷಣ ಆಚಾರ್ಯ ಉಪಸ್ಥಿತರಿದ್ದರು.