ಕರಾವಳಿ

ಹಿಜಾಬ್ ವಿವಾದ: ಕೋಮು ಸೌಹಾರ್ದತೆಯನ್ನು ಕೆಡಿಸಲು ಬಿಜೆಪಿ ಪ್ರಯತ್ನ- ಎಸ್‌ಡಿಪಿಐ ಆರೋಪ.!

ಉಡುಪಿ: ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕಾದ ಹಿಜಾಬ್‌ಗಾಗಿ ಹೋರಾಟವನ್ನು ನಡೆಸುತ್ತಿರುವಾಗ, ಹಿಜಾಬ್ ವಿಷಯವನ್ನು ವಿವಾದ ಮಾಡಿ ಆ ಮೂಲಕ ಸಮಾಜದ ಸೌಹಾರ್ದತೆಯನ್ನು ಕೆಡಿಸಿ, ಕೋಮು ಧ್ರವೀಕರಣಗೊಳಿಸಿ, ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಬಿಜೆಪಿ ಶಾಸಕ ರಘುಪತಿ ಭಟ್ ಮಾಡುತ್ತಿದ್ದಾರೆ ಎಂದು ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್‌ರವರು ಆರೋಪಿಸಿದ್ದಾರೆ.

ಹಿಜಾಬ್ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ 4 ಗೋಡೆಗಳ ಮಧ್ಯೆ ಚರ್ಚಿಸಿ ಬಗೆಹರಿಸಬಹುದಾಗಿದ್ದ ವಿಷಯವನ್ನು, ಹಿಜಾಬ್’ಗೆ ಅವಕಾಶ ನೀಡಿದರೆ ಇನ್ನೊಂದು ಧರ್ಮದವರು ಕೇಸರಿ ಶಾಲು ಹಾಕುತ್ತಾರೆ, ಕೇಸರಿ ಪೇಟ ಧರಿಸುತ್ತಾರೆ, ಇವತ್ತು ಹಿಜಾಬ್‌ಗೆ ಅವಕಾಶ ನೀಡಿದರೆ, ನಾಳೆ ನಮಾಝ್‌ಗೆ ಅವಕಾಶ ಕೇಳುತ್ತಾರೆ ಎನ್ನುವ ಅಸಂಬದ್ಧ ಹೇಳಿಕೆಯನ್ನು ನೀಡಿ ಜನರಲ್ಲಿ ಗೊಂದಲವನ್ನು ಸೃಷ್ಟಿಸಿ, ಹಿಜಾಬ್ ವಿಷಯವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿವಾದ ಆಗುವ ಹಾಗೆ ಮಾಡುತ್ತಾರೆ.

ಅದೇ ರೀತಿ ಕಾಲೇಜು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾದ ಯಶ್ಪಾಲ್ ಸುವರ್ಣರವರು ಹಿಜಾಬ್‌ಗಾಗಿ ಹಠ ಮಾಡಿದರೆ, ನಮ್ಮ ಬಳಿ ಹಿಂದೂ ಕಾರ್ಯಕರ್ತರಿದ್ದಾರೆ. ಯಾವ ರೀತಿ ಇದನ್ನು ತಡೆಯಬೇಕು ಎಂದು ತಿಳಿದಿದೆ ಎನ್ನುವ ಹೇಳಿಕೆಯನ್ನು ನೀಡಿ ಕೋಮು ಸಾಮರಸ್ಯವನ್ನು ಕೆಡಿಸಿ, ಆ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇಂತಹ ಕೋಮುವಾದಿ ಮನಸ್ಥಿತಿಯ ಜನರು ಸರಕಾರಿ ಕಾಲೇಜಿನ ಅಭಿವೃದ್ಧಿ ಮಂಡಳಿಯಲ್ಲಿ ಇರುವ ಕಾರಣ, ವಿದ್ಯಾರ್ಥಿನಿಯರು ತಮ್ಮ ಸಾಂವಿಧಾನಿಕ ಹಕ್ಕಿನಿಂದ ವಂಚಿಸಲ್ಪಡುತ್ತಿದ್ದಾರೆ.

ಕಳೆದ 10-12 ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ, ಮುಸ್ಲಿಮರನ್ನು ಶಿಕ್ಷಣದಿಂದ ವಂಚಿತಾರನ್ನಾಗಿಸಲು ಮತ್ತು ತನ್ನ ಹಿಂದುತ್ವ ಅಜೆಂಡಾದ ಭಾಗವಾಗಿ ಕರಾವಳಿಯ ಕೆಲವು ಕಾಲೇಜುಗಳಲ್ಲಿ ಹಿಜಾಬ್ ಅನ್ನು ಸಮಸ್ಯೆಯಾಗಿ ಬಿಂಬಿಸುತ್ತಿದೆ. ಆದರೆ ಉಡುಪಿಯ ಸರಕಾರಿ ಕಾಲೇಜಿನ ವಿಷಯದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ವಿದ್ಯಾರ್ಥಿನಿಯರ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿರುವುದನ್ನು ಗಮನಿಸಿ ವರದಿ ನೀಡುವಂತೆ ಸರಕಾರ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನೊಟೀಸ್ ಜಾರಿ ಮಾಡಿ ಉತ್ತರ ನೀಡುವಂತೆ ಚಾಟಿ ಬೀಸಿದೆ.

ಇದರಿಂದ ತೀವ್ರ ಮುಖಭಂಗಕ್ಕೀಡಾಗಿರುವ ಉಡುಪಿ ಶಾಸಕರು, ಎಸ್‌ಡಿಪಿಐ ಕುಮ್ಮಕ್ಕಿನಿಂದ ಹಿಜಾಬ್ ವಿವಾದವಾಗಿದೆ ಎನ್ನುವ ಬಾಲಿಷ ಹೇಳಿಕೆಯನ್ನು ನೀಡಿರುತ್ತಾರೆ. ಈ ಹೇಳಿಕೆಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ನಜೀರ್ ಅಹ್ಮದ್‌ರವರು ಖಂಡಿಸಿರುತ್ತಾರೆ ಹಾಗೂ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಬಿಜೆಪಿಯ ಈ ಷಡ್ಯಂತ್ರವನ್ನು ಅರಿಯಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಬೆಂಬಲವನ್ನು ಸೂಚಿಸಬೇಕು ಎಂದು ಮನವಿ ಮಾಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!