ಕರಾವಳಿ

ಪ್ರಕೋಷ್ಠಗಳ ಕ್ರಿಯಾಶೀಲತೆ ಪಕ್ಷದ ಸರ್ವಸ್ಪರ್ಶಿ ಸರ್ವವ್ಯಾಪಿ ತತ್ವಕ್ಕೆ ಶಕ್ತಿ ತುಂಬಲಿದೆ: ಕೆ.ಉದಯ ಕುಮಾರ್ ಶೆಟ್ಟಿ

ಸಮಾಜದ ಎಲ್ಲಾ ಸ್ತರದ ಜನತೆಯನ್ನು ತಲುಪುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ವೃತ್ತಿಪರರನ್ನೊಳಗೊಂಡಿರುವ ಪ್ರಕೋಷ್ಠಗಳನ್ನು ರಚಿಸಲಾಗಿದೆ. ಪ್ರಕೋಷ್ಠಗಳ ಬದ್ಧತೆ ಮತ್ತು ಕ್ರಿಯಾಶೀಲತೆ ಪಕ್ಷದ ಸರ್ವಸ್ಪರ್ಶಿ ಸರ್ವವ್ಯಾಪಿ ತತ್ವಕ್ಕೆ ಶಕ್ತಿ ತುಂಬಲಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಮೇ 15ರಂದು ಉಡುಪಿಯ ಹೋಟೆಲ್ ಶಾರದಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಡೆದ ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ‌ ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳ ಯಶಸ್ವೀ ಅನುಷ್ಠಾನದ ಮೂಲಕ ಅಭಿವೃದ್ಧಿಪರ ಆಡಳಿತ ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದನ್ನು ಜನಮಾನಸದಲ್ಲಿ ಸಾಬೀತುಪಡಿಸಿದೆ ಎಂದರು.

ಇಂದು ಸಮಾಜದ ವಿವಿಧ ಸಮುದಾಯ, ವೃತ್ತಿಪರರು ಎಲ್ಲರೂ ಒಂದಾಗಿ ಸಬ್ ಕೇ ಸಾಥ್ ಸಬ್ ಕೇ ವಿಕಾಸ್, ಸಬ್ ಕೇ ವಿಶ್ವಾಸ್ ಎಂಬ ಉದಾತ್ತ ಧ್ಯೇಯದಡಿ ಕೈಜೋಡಿಸಿರುವ ಫಲವಾಗಿ ಬಿಜೆಪಿ ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದು‌‌ ನಿಂತಿದೆ. ಈ‌ ನಿಟ್ಟಿನಲ್ಲಿ ಪ್ರಕೋಷ್ಠಗಳು ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವ್ಯವಸ್ಥಿತ ರೀತಿಯಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪಕ್ಷ ಸಂಘಟನೆಗೆ ಶಕ್ತಿ ತುಂಬುವಂತಾಗಬೇಕು ಎಂದು ಉದಯ ಕುಮಾರ್ ಶೆಟ್ಟಿ ಹೇಳಿದರು.

ಸಮಾರೋಪ‌ ಸಮಾರಂಭದ‌ ಅಧ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ‌‌ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ಜಿಲ್ಲಾ ಪ್ರಕೋಷ್ಠಗಳ ಸಮಾವೇಶವು ಅತ್ಯಂತ ಯಶಸ್ವಿಯಾಗಿ ‌ಮೂಡಿಬಂದಿದೆ. ಪಕ್ಷದ ಕೆಲಸ ಕಾರ್ಯಗಳು ನಿತ್ಯ ನಿರಂತರವಾಗಿವೆ. ವಿರೋಧ ಪಕ್ಷಗಳು ನಿಂತ ನೀರಿನಂತಿವೆ. ಬಿಜೆಪಿಯ ಚಟುವಟಿಕೆಗಳು ಹರಿಯುವ ನೀರಿನಂತೆ ಸದಾ ಪರಿಶುದ್ಧವಾಗಿದ್ದು ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಚೈತನ್ಯ ‌ತುಂಬುವ ರೀತಿಯಲ್ಲಿ ಸಾಗುತ್ತಿವೆ. ಪ್ರಶಿಕ್ಷಣ ವರ್ಗ, ವಿಸ್ತಾರಕ ಯೋಜನೆ, ಬೂತ್ ಸಮಿತಿ, ಪಂಚ ರತ್ನ, ಪೇಜ್ ಪ್ರಮುಖ್, ಪೇಜ್ ಸಮಿತಿ, ಕೀ ವೋಟರ್ಸ್ ಇತ್ಯಾದಿ ಅಭಿಯಾನಗಳು ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತಿವೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ದೇಶ ಸೇವೆಯ ಪರಿಕಲ್ಪನೆ ಹೊಂದಿರುವ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಪ್ರಕೋಷ್ಠಗಳ ಸಹಿತ ವಿವಿಧ ಸ್ತರದ ಜವಾಬ್ದಾರಿಯುತ ಪದಾಧಿಕಾರಿಗಳು, ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಮುಂಬರಲಿರುವ ಎಲ್ಲಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸದೃಢ ಪಕ್ಷ ಸಂಘಟನೆಯತ್ತ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ‌ ನೀಡಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ರಾಜ್ಯ ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಪ್ರದೀಪ್ ಜಿ. ಪೈ, ಸಹ ಸಂಚಾಲಕ ಗುಂಜೂರು ಚರಣ್, ಉಡುಪಿ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ್ ಕುಮಾರ್ ಉದ್ಯಾವರ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಮತ್ತು ಮಂಡಲ ಪ್ರಕೋಷ್ಠಗಳ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕ ಕೈಲಾಡಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಮಾಧ್ಯಮ ಪ್ರಕೋಷ್ಠದ ಸಂಚಾಲಕ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!