
ದೇಶದ ಆರ್ಥಿಕ ಸ್ಥಿತಿ ಮುಂದಿನ ದಿನಗಳಲ್ಲಿ ತೀರಾ ಕೆಟ್ಟ ಪರಿಣಾಮಗಳನ್ನುಂಟು ಮಾಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ . ಇದು ಎಲ್ಲರೂ ಒಪ್ಪವ ಮಾತೇ ಆಗಿದೆ . ಇಂದು ಕಳೆದು ಕೊಂಡಿದ್ದೆಲ್ಲ ಮರಳಿ ಪಡೆಯಲು ಏನು ಮಾಡಬೇಕು ಅದು ಸರಕಾರಕ್ಕೆ ಬಿಟ್ಟ ವಿಚಾರ. ಸರಕಾರ ಆ ದಿಶೆಯಲ್ಲಿ ಕಾರ್ಯ ತಂತ್ರ ಈಗಾಗಲೇ ರೂಪಿಸಿರಲೂಬಹುದು. ಯಾವುದೇ ಸರಕಾರ ಬಂದರೂ ಮಾಡಲೇ ಬೇಕಾದುದು. ಮಾಡಿಯೇ ಮಾಡುತ್ತದೆ . ಪ್ರಜೆಗಳು ಕೂಡ ಸರಕಾರದ ಯಾವುದೇ ಆರ್ಥಿಕ ಭದ್ರತೆಗಾಗಿ , ಸುಧಾರಣೆಗಾಗಿ ಕೈಗೊಳ್ಳುವ ಕ್ರಮವನ್ನು ಬೆಂಬಲಿಸಲೇ ಬೇಕು . ಆ ಸಂಬಂಧ ಸರಕಾರದ ಕಠಿಣ ನಿರ್ಧಾರವನ್ನು ಸಹಿಸಲೇ ಬೇಕಾಗುತ್ತದೆ. ಅದೇನು ಶಾಶ್ವತ ಕಷ್ಟ ಏನಲ್ಲ. ಆರ್ಥಿಕ ಸ್ಥಿತಿ ಒಂದು ಹದಕ್ಕೆ ಮೊದಲಿನಂತೆ ಬಂದು ನಿಂತರೆ ಜನರ ಸ್ಥಿತಿಗತಿ ಕೂಡಾ ಹಂತ ಹಂತವಾಗಿ ಸುಧಾರಿಸಿಸುತ್ತ ಸಾಗುತ್ತದೆ . ಇಂದು ಜನತೆಗೆ ಸರಕಾರ ಎಷ್ಟು ಮುಖ್ಯವೋ ಸರಕಾರಕ್ಕೂ ಜನರ ಸಹಕಾರ ಅಷ್ಟೇ ಮುಖ್ಯ. ಇವತ್ತಿನ ಸ್ಥಿತಿಗತಿಗೆ ಪರಸ್ಪರರ ನಡುವೆ ಸಹಕಾರದ ಅನಿವಾರ್ಯತೆ ಎದುರಾಗಿದೆ . ಆರ್ಥಿಕ ಸುಧಾರಣೆಗೆ ಪ್ರಜೆಗಳು ಸರಕಾರಕ್ಕೆ ಸಲಹೆಗಳನ್ನು ಧಾರಾಳವಾಗಿ ನೀಡಬೇಕು . ಒಳ್ಳೆಯ ಸಲಹೆ ಎಂದಾದರೆ ಸರಕಾರ ಅದನ್ನು ತಜ್ಞರೊಂದಿಗೆ ಚರ್ಚಿಸಿ ಸ್ವೀಕರಿಸುವಂತಾಗಬೇಕು. ಸರಕಾರ ತನ್ನ ಕಾಲುಬುಡದ ಆರ್ಥಿಕ ಅಂದಾದುಂದಿ ಖರ್ಚು ವೆಚ್ಚಗಳ ಪಟ್ಟಿ ಮಾಡಬೇಕು . ಅದು ಈ ದೇಶದಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದ ಒಂದು ಅನಿಷ್ಟ ಪದ್ಧತಿ . ಸರಕಾರದ ಯೋಜನೆ , ಜನಪ್ರತಿನಿಧಿಗಳ, ಅಧಿಕಾರಿಗಳ ಮಟ್ಟದಲ್ಲಿಯೇ ಬೇಕಾಬಿಟ್ಟಿ ಖರ್ಚು ವೆಚ್ಚಗಳು ಆಗುತ್ತಿವೆ . ಏಲ್ಲಿ ಹೇಗೆ ಯಾವೆಲ್ಲ ರೀತಿಯಲ್ಲಿ ಹಣದ ದುರುಪಯೋಗ ಆಗುತ್ತಿದೆ ಮೊದಲು ಮನಗಂಡು ಅದರ ಬಗ್ಗೆ ಯಾವುದೇ ಮುಲಾಜು ಇಲ್ಲದೇ ಕಟ್ಟು ನಿಟ್ಟಿನ ನಿರ್ಣಯಕ್ಕೆ , ಕ್ರಮಕ್ಕೆ ಮುಂದಾಗಬೇಕು . ಮೊದಲು ತುದಿಯಿಂದ ಸುರುವಾಗಿ ಬುಡಕ್ಕೆ ಹೋಗಬೇಕು .
ಸರಕಾರದ ಜನ ಪ್ರತಿನಿಧಿಗಳಿಗಾಗಿ ಮಾಡುವ ಮಿತಿ ಮೀರಿದ ವೆಚ್ಚಗಳನ್ನು ಹಿಡಿತಕ್ಕೆ ತಂದರೆ ಒಳ್ಳೆಯದು . ನಮ್ಮ ರಾಜ್ಯವನ್ನೇ ಒಂದು ಉದಾಹರಣೆಗೆ ತೆಗೆದು ಕೊಳ್ಳುವದಾದರೆ ಒಬ್ಬ ಜನಪ್ರತಿನಿಧಿ ಶಾಸಕ, ಪರಿಷತ್ ಸದಸ್ಯರುಗಳಿಗಾಗಿ ವೇತನ ಇತರೇ ಭತ್ಯೆ ಸೇರಿ ಒಂದು ಲಕ್ಷ ನಲವತ್ತು ಸಾವಿರ ರೂಪಾಯಿ ತಿಂಗಳಿಗೆ ಖರ್ಚಾಗುತ್ತದಂತೆ. ಅನೇಕ ಉಚಿತ ಸೇವೆಗಳ ಹೊರತಾಗಿಯೂ ಇಷ್ಟು ವೇತನದ ಅಗತ್ಯ ಏನಿದೆ ? ಅಲ್ಲದೇ ಶಾಸಕರ ಭವನದಲ್ಲಿ ಪ್ರತಿಯೊಬ್ಬ ಶಾಸಕರ ತಿಂಗಳ ಫೋನ್ ಬಿಲ್ ಕೇಳಿದರೆ ಹೌಹಾರಿ ಬೀಳಬೇಕು ! ಇವುಗಳ ನಿಯಂತ್ರಣ ಆಗಬೇಕು . ಎಲ್ಲಕ್ಕಿಂತ ಇನ್ನೊಂದು ಮಹತ್ವದ ಸಂಗತಿ ಎಂದರೆ . ಜನಪ್ರತಿನಿಧಿಗಳ ನಿವೃತ್ತಿ ವೇತನದ ಬಗ್ಗೆ ಹೇಳಬೇಕಿದೆ.
ಒಬ್ಬ ವ್ಯಕ್ತಿ ಒಮ್ಮೆ ಶಾಸಕನಾದ ಆತನೇ ನಂತರ ಮುಂದಿನ ಚುನಾವಣೆಯಲ್ಲಿ ಪರಿಷತ್ ಸದಸ್ಯನಾದ ಆಮೇಲೆ ಮಂತ್ರಿಯಾದ ಆ ಅವಧಿಯು ಮುಗಿದ ನಂತರ ಆತನೇ ಸಂಸದನೂ ಆದ ಅಂತಿಟ್ಟುಕೊಳ್ಳಿ. ಶಾಸಕ, ಪರಿಷತ್ ಸದಸ್ಯ, ಮಂತ್ರಿ , ಸಂಸದ ಈ ಮೂರು ನಿವೃತ್ತಿ ವೇತನ ಅವನಿಗೆ ಸಿಗುತ್ತದೆ . ಇದರ ಅಗತ್ಯ ಏನಿದೆ ? ಕೊನೆಯಲ್ಲಿ ಯಾವ ಹುದ್ದೆಯಿಂದ ನಿವೃತ್ತಿಗೊಂಡರೋ ಅಲ್ಲಿಂದ ಆ ಒಂದು ನಿವೃತ್ತಿ ವೇತನ ಮಾತ್ರ ಪಡೆಯುವಂತಾಗಬೇಕು. ಹಲವಾರು ಜನ ರಾಜಕಾರಣಿಗಳು ಎರಡು ಮೂರು , ನಾಲ್ಕು ಕಡೆಗಳಿಂದ ನಿವೃತ್ತಿ ವೇತನ ಪಡೆಯುತ್ತಿದ್ದಾರೆ ಎಂಬುದು ಸತ್ಯ. ಹಿರಿಯ ರಾಜಕಾರಣಿ ಡಿ. ಬಿ. ಚಂದ್ರೇಗೌಡರು ನಾಲ್ಕು ನಿವೃತ್ತಿ ವೇತನ ಪಡೆಯುತ್ತಿದ್ದಾರೆ. ಹಾಲೀ ಸಚಿವರುಗಳಾದ ಈಶ್ವರಪ್ಪ ಮೂರು ಕಡೆಯಿಂದ ನಿವೃತ್ತಿ ವೇತನ ಪಡೆಯುತ್ತಿದ್ದಾರೆ. ಕೇವಲ ಈ ಇಬ್ಬರು ಮಾತ್ರ ಅಲ್ಲದೇ ರಾಜ್ಯ ಮತ್ತು ದೇಶದ ರಾಜಕಾರಣಿಗಳ ಒಟ್ಟೂ ಇಂತಹ ನಿವೃತ್ತಿ ವೇತನದ ಲೆಕ್ಕ ತೆಗೆದರೆ ಅದು ದೊಡ್ಡ ಪ್ರಮಾಣದ ಹಣದ ಮೊತ್ತವೇ ಆಗುತ್ತದೆ . ಅದನ್ನು ನಿಯಂತ್ರಿಸಿದರೆ ಪ್ರತಿ ತಿಂಗಳು ಸರಕಾರದ ಉಳಿತಾಯ ಖಾತೆಗೆ ಜಮಾ ಆಗುತ್ತದೆ . ಇದನ್ನು ಕೇಂದ್ರ ಸರ್ಕಾರ ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಬಹಳ ಗಂಭೀರವಾಗಿ ಪರಿಗಣಿಸಿ ಅದನ್ನು ಅನುಷ್ಠಾನಗೊಳಿಸಬೇಕು.
ಕರ್ನಾಟಕದ ರಾಜ್ಯ ಸರ್ಕಾರ ಜನಪ್ರತಿನಿಧಿಗಳ 30 ಪರ್ಸೆಂಟ ತಿಂಗಳ ಸಂಬಳವನ್ನು ಬಿಟ್ಟು ಕೊಡುವದಾಗಿ ಇತ್ತೀಚೆಗೆ ಘೋಷಿಸಿದೆ . ಅದು ಯಾವುದೇ ರೀತಿಯ ಜನಪ್ರತಿನಿಧಿಗಳ ದೊಡ್ಡ ದಾನ ಅಂತ ಅನಿಸುವದಿಲ್ಲ. ಬಹುತೇಕ ರಾಜಕಾರಣಿಗಳು ರಾಜಕೀಯದಿಂದಲೇ ಕೋಟ್ಯಂತರ ಹಣ ಸಂಪಾದನೆ ಮಾಡಿ ಸಾಕಷ್ಟು ಆಸ್ತಿ ಪಾಸ್ತಿ ಹೊಂದಿರುವವರೇ ಹೆಚ್ಚಾಗಿ ಇರುವಾಗ ಅಂತವರ ಉತ್ಪನ್ನದಲ್ಲಿ ಒಂದಿಷ್ಟು ಭಾಗ ಸರಕಾರ ಮುಟ್ಟಗೋಲು ಹಾಕಿಕೊಳ್ಳಬೇಕು. ರಾಜಕಾರಣಿಗಳ ವಿದೇಶಿ ಅಕ್ರಮ ಆಸ್ತಿಯನ್ನು ಕೂಡಾ ಮುಟ್ಟುಗೋಲು ಹಾಕಿಕೊಂಡು ಅದರಿಂದ ಬಂದ ಹಣವನ್ನು ಸರಕಾರದ ಬೊಕ್ಕಸಕ್ಕೆ ಹಾಕಿ ಕೊಳ್ಳುವಂತಾಗಬೇಕು. ಸರಕಾರಕ್ಕೆ ಸಾಧ್ಯ ಆಗದೇ ಇದ್ದರೆ ಸುಪ್ರೀಂ ಕೋರ್ಟಿನಲ್ಲಿ ಇದನ್ನು ಪ್ರಶ್ನಿಸಿ ನಿಷ್ಕರ್ಷೆ ಮಾಡಿ ಕೋರ್ಟ್ ಆದೇಶದಂತೆ ಸರಕಾರ ನಡೆದುಕೊಳ್ಳಬೇಕು. ಶಾಸಕರ, ಮಂತ್ರಿ , ಸಂಸದರ ಅಕ್ರಮ ಆಸ್ತಿ ಸಂಪತ್ತುಗಳ ಬಗ್ಗೆ ಬೇರೆ ಬೇರೆ ಪ್ರಕರಣಗಳಲ್ಲಿ ಬಹಿರಂಗವಾಗಿ ಈ ಹಿಂದೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ . ದೇಶದ ಇಂತಹ ಸಂದಿಗ್ಧ ಸಮಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥಕ್ಕೆ ಹೋದರೆ ತೀರ್ಪು ಎತ್ತ ವಾಲಬಹುದು ಎಂಬುದನ್ನು ಊಹಿಸಬಹುದು . ಹೀಗಾಗಿ ಆ ಕಾರ್ಯಕ್ಕೆ ಇದೀಗ ಶುಭ ಗಳಿಗೆ ಬಂದಿದೆ ಎಂದೆನ್ನಬಹುದು.
ಇನ್ನೊಂದು ಮುಖ್ಯ ವಿಚಾರ ಜನಕ್ಕೆ ಯಾವುದೇ ಪ್ರಯೋಜನಕಾರಿಯಲ್ಲದ ಹಲವಾರು ಸರಕಾರದ ಇಲಾಖೆಗಳು. ಹವಾಮಾನ ಇಲಾಖೆ , ರೇಷ್ಮೆ ಕೃಷಿ ಇಲಾಖೆ , ಸಣ್ಣ ನೀರಾವರಿ , ಕೈಗಾರಿಕಾ ಇಲಾಖೆ , ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇಂತಹ ಕೆಲಸವೇ ಇಲ್ಲದೇ ನಿತ್ಯ ಆಫೀಸ್ ಗೆ ಬಂದು ನೊಣ ಹೊಡೆದು ಹೋಗುವವರಿಗೆ ತಿಂಗಳಿಗೆ 30-40 ಸಾವಿರ ಸಂಬಳ. ಯಾಕಾಗಿ ? ಅನವಶ್ಯಕ ಅಂತ ಅನಿಸುವದಿಲ್ಲವೇ ?
ಒಂದು ಉದಾಹರಣೆಗೆ ಹೇಳುವದಾದರೆ ಹವಾಮಾನ ಇಲಾಖೆಯೊಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಇದೆ . ಎರಡು ಚಿಕ್ಕ ಕೊಠಡಿಯಲ್ಲಿ ಈ ಆಫೀಸ್ ಇದೆ . ನೌಕರ ವರ್ಗ 7 ರಿಂದ 8 ಜನರು. ಎಲ್ಲರಿಗೂ ಕೇಂದ್ರ ಸರ್ಕಾರದ ಕೈ ತುಂಬಾ ಸಂಬಳ. ಕೆಲಸ ಏನಿದೆ ಇವರಿಗೆ ಅಲ್ಲಿ ? ಮೂರು ನಾಲ್ಕು ತಾಸುಗಳ ಪಾಳಿ ಮಾಡಿಕೊಂಡು ಆಫೀಸ್ ಗೆ ಬಂದು ಹಾಜರಾತಿಯ ಬಗ್ಗೆ ದಾಖಲೆಗಾಗಿ ಒಂದು ಸಹಿ ಗೀಚಿ ಬಂದರಕ್ಕೆ ಹೋಗಿ ಮೀನು , ತರಕಾರಿ ತೆಗೆದುಕೊಂಡು ಮನೆಯಲ್ಲಿ ಹಾಯಗಿ ಉಂಡು ತಿಂದು ಮಲಗುವದು. ಇಂದು ಹವಾಮಾನ ವರದಿ ತಿಳಿಯಲು ಈ ಇಲಾಖೆಯೇ ಏಕೆ ಬೇಕು ? ಗೂಗಲ್ ನಲ್ಲಿ ಸರ್ಚ ಮಾಡಿ ನಾವು ನೀವು ಯಾರೇ ಆದರೂ ಕುಳಿತಲ್ಲಿ ಮಲಗಿದಲ್ಲಿ ಸುಲಭವಾಗಿ ತಿಳಿಯಬಹುದಲ್ಲವೇ ? ಈಡೀ ದೇಶದ ಪ್ರತಿಯೊಂದು ಕಡೆಯೂ ಹವಾಮಾನ ಇಲಾಖೆ ಇದೆ . ಅದಕ್ಕಾಗಿ ಸರಕಾರದ ಹಣ ಎಷ್ಟು ಅನವಶ್ಯಕ ಫೋಲಾಗುತ್ತಿದೆ ಎಂಬುದನ್ನು ಲೆಕ್ಕ ತೆಗೆದರೆ ಕಂಗಾಲಾಗಬಹುದು. ಇಂತಹ ಹಲವಾರು ಇಲಾಖೆಯನ್ನು ದೇಶದಲ್ಲಿ ಇರುವದನ್ನು ಸರಕಾರ ಗಮನಿಸಬೇಕಿದೆ. ಇಂತಹ ಸಂಗತಿಗಳನ್ನು ಹಗುರವಾಗಿ ಪರಿಗಣಿಸದೇ ಇದ್ದರೆ ಆರ್ಥಿಕ ಚೇತರಿಕೆ ಕಾಣಲು ಹೇಗೆ ಸಾಧ್ಯ ಎಂಬುದು ನನ್ನ ಪ್ರಶ್ನೆ ….ಇಂದು ಇದಕ್ಕೆ ಸೂಕ್ತ ಕಾಲ ಬಂದಿದೆ . ಸರಕಾರ ಈ ದಿಸೆಯಲ್ಲಿ ತೆಗೆದು ಕೊಳ್ಳುವ ಕಠಿಣ ನಿರ್ಧಾರಕ್ಕೆ ಜನರಿಂದ ಯಾವುದೇ ಆಕ್ಷೇಪ ಬರಲಾರದು. ಇದು ಅನಿವಾರ್ಯ ಎಂಬುದು ಸಾಮಾನ್ಯ ಜನರಿಗೆ ಕೂಡಾ ಮನವರಿಕೆ ಆಗಿದೆ . ಆಗದೇ ಹೋದಲ್ಲಿ ಅಂತವರಿಗೆ ಸುಲಭವಾಗಿ ಮನವರಿಕೆ ಮಾಡಿಕೊಡುವದಕ್ಕೆ ಇದು ಸಕಾಲ. ಸರಕಾರ ಮೀನ-ಮೇಷ ಎಣಿಸದೆ ಈ ಎಲ್ಲ ನಿರ್ಧಾರ ಧೈರ್ಯದಿಂದ ಕೈಗೊಳ್ಳುವದನ್ನು ಜನ ನಿರೀಕ್ಷಿಸಿದ್ದಾರೆ. ಅಲ್ಲವೇ ?
ಗೌರೀಶ್ ಶಾಸ್ತ್ರಿ ಹಿರಿಯ ಪತ್ರಕರ್ತರು.