ಕರಾವಳಿ

ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಪ್ರಮಾಣ ಹೆಚ್ಚಿಸಿ: ಪ್ರಸನ್ನ ಹೆಚ್

ಉಡುಪಿ: ಜಿಲ್ಲೆಯ ಪ್ರತಿಯೊಂದು ಬ್ಯಾಂಕುಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಾಯೋಜಿತ ವಿವಿಧ ಯೋಜನೆಗಳ ಆಯ್ದ ಫಲಾನುಭವಿಗಳಿಗೆ ಹಾಗೂ ಹೆಚ್ಚಿನ ಸಾರ್ವಜನಿಕರಿಗೆ ಆರ್ಥಿಕ ನೆರವನ್ನು ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ನಿರ್ದೇಶನ ನೀಡಿದರು.

ಅವರು  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹವಾಗುತ್ತಿದ್ದರೂ ಸಹ ಸಾಲ ನೀಡುವ ಪ್ರಮಾಣ ಕಡಿಮೆ ಇದ್ದು ಇದರಿಂದ ಸಾಲ ಮತ್ತು ಠೇವಣಿ ಅನುಪಾತ ಅತ್ಯಂತ ಕಡಿಮೆ ಇದ್ದು, ಈ ಪ್ರಮಾಣವನ್ನು ಶೇ.60 ಕ್ಕೆ ಹೆಚ್ಚಿಸಬೇಕು. ವಿವಿಧ ಸರ್ಕಾರಿ ಯೋಜನೆಯ ಫಲಾನುಭವಿಗಳ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸದೆ ಸಾಲ ಮಂಜೂರು ಮಾಡಬೇಕು.

ಸರ್ಕಾರಿ ಯೋಜನೆಯ ಅರ್ಜಿಗಳಲ್ಲಿದೋಷಗಳಿದ್ದರೆ
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಸರಿಪಡಿಸಿ, ಸಾಲ ಮಂಜೂರು ಮಾಡುವ ಮೂಲಕ ಯೋಜನೆಗಳ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬ್ಯಾಂಕ್
ಖಾತೆಗಳನ್ನು ಉದ್ಯಮ್ ಪೋರ್ಟ್‌ನಲ್ಲಿ ನೊಂದಣಿ
ಮಾಡಬೇಕು. ಜಿಲ್ಲೆಯಲ್ಲಿ 16000 ಕ್ಕೂ ಹೆಚ್ಚು ಇಂತಹ ಕೈಗಾರಿಕೆಗಳಿದ್ದು, ಈ ಪೋರ್ಟಲ್‌ನಲ್ಲಿ ನೊಂದಾಯಿಸಿರುವ ಕೈಗಾರಿಕೆಗಳಿಗೆ ಸಾಲ ನೀಡುವಾಗ ಉದ್ಯಮ್ ನೊಂದಣಿ ಆಧಾರದ ಮೇಲೆ ಟ್ರೇಡ್ ಲೈಸೆನ್ಸ್ ಅನುಮತಿ ಪತ್ರವಿಲ್ಲದೇ
ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ಎನ್.ಓ.ಸಿ ಪಡೆದು ಸಾಲ ವಿತರಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚೆಗೆ ಇಬ್ಬರು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮೊಬೈಲ್‌ನ ಡಿಪಿ ಬಳಸಿಕೊಂಡು 10,000 ರೂ. ಗಳ ಅಮೆಜಾನ್ ಗಿಫ್ಟ್ ವೋಚರ್ ನೀಡುವಂತೆ ಸಂದೇಶಗಳು ಬಂದಿವೆ. ಅಧಿಕಾರಿಗಳು ಇಂತಹ ವಂಚನೆ
ಬಗ್ಗೆ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ನಷ್ಟವಾಗಿಲ್ಲ. ಆದ್ದರಿಂದ ಇಂತಹ ವಂಚನೆ ಪ್ರಕರಣಗಳ ಕುರಿತಂತೆ ಗ್ರಾಹಕರಿಗೆ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಪಿಎಂ ಸ್ವನಿಧಿ ಯೋಜನೆಯ ಅರ್ಜಿಗಳನ್ನು ಆದ್ಯತೆಯಲ್ಲಿ ವಿಲೇವಾರಿ ಮಾಡಿ, ಸ್ವ-ಸಹಾಯ ಗುಂಪುಗಳು
ಬ್ಯಾಂಕ್ ಖಾತೆ ತೆರೆಯಲು ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಹೆಚ್ಚಿನ ಸಂಖ್ಯೆಯ ಬೆಳೆ ವಿಮೆ ಅರ್ಜಿಗಳನ್ನು ನೊಂದಾಯಿಸುವಂತೆ ತಿಳಿಸಿದರು.

ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮೆನೇಜರ್ ಲೀನಾ ಪಿಂಟೋ ಮಾತನಾಡಿ, 2021-22 ರ ಸಾಲಿನ ಅಂತ್ಯಕ್ಕೆ ಜಿಲ್ಲೆಯಲ್ಲಿ 15,173 ಕೋಟಿ ರೂ. ಸಾಲ ವಿತರಿಸಿ, ನಿಗದಿತ ಗುರಿಗಿಂತ ಶೇ.13.81 ಹೆಚ್ಚಿನ ಬೆಳವಣಿಗೆ ಸಾಧಿಸಲಾಗಿದೆ. ಕೃಷಿ ವಲಯಕ್ಕೆ 4,776 ಕೋಟಿ ರೂ. ಸಾಲ ವಿತರಿಸಿ ಶೇ.60.01%
ಸಾಧನೆ ಮಾಡಿದ್ದು, ಈ ವರ್ಷದಲ್ಲಿ ಇದರ ಪ್ರಮಾಣವನ್ನು ಶೇ.100 ಕ್ಕೆ ಹೆಚ್ಚಿಸಲಾಗುವುದು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯಕ್ಕೆ 2635 ಕೋಟಿ ರೂ. ಸಾಲ ವಿತರಿಸಿ, 102.65% ಸಾಧನೆ ಮಾಡಲಾಗಿದೆ. ಶೈಕ್ಷಣಿಕ ವಲಯದಲ್ಲಿ 96 ಕೋಟಿ ರೂ. ಸಾಲ ವಿತರಿಸಿ, 59.25% ಸಾಧನೆ ಮಾಡಲಾಗಿದೆ.

ವಸತಿ ವಲಯಕ್ಕೆ 653 ಕೋಟಿ ರೂ. ಸಾಲ ವಿತರಿಸಿ
70.21% ಸಾಧನೆ ಮಾಡಲಾಗಿದ್ದು, ಎಲ್ಲಾ ಬ್ಯಾಂಕ್‌ಗಳು ಪ್ರಸಕ್ತ ವರ್ಷದಲ್ಲಿ ಶೈಕ್ಷಣಿಕ ಮತ್ತು ವಸತಿ ವಲಯಕ್ಕೆ ಹೆಚ್ಚಿನ ಸಾಲ ವಿತರಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಠೇವಣಿ ಮತ್ತು ಸಾಲ ಅನುಪಾತವು ಶೀ.47.25% ಇದ್ದು, ಎಲ್ಲಾ ಬ್ಯಾಂಕ್‌ಗಳ ವತಿಯಿಂದ ಸಾಲ ನೀಡುವ ಅಭಿಯಾನ ನಡೆಸಿದ್ದು 298 ಆರ್ಥಿಗಳಿಗೆ 45.54 ಕೋಟಿ ರೂ. ವಿತರಿಸಿದ್ದು, ಇಂತಹ ಅಭಿಯಾನವನ್ನು ನಿರಂತರವಾಗಿ
ನಡೆಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಲ್ಲಿ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ ಬ್ಯಾಂಕ್‌ಗಳನ್ನು ಅಭಿನಂದಿಸಲಾಯಿತು.

ಸಭೆಯಲ್ಲಿ ಆರ್.ಬಿ.ಐನ ಅಧಿಕಾರಿ ಹಾಗೂ ಜಿಲ್ಲಾ ಲೀಡ್ ನೋಡೆಲ್ ಅಧಿಕಾರಿ ತನ ನಂಜಪ್ಪ ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮೆನೇಜರ್‌ ವಾಸಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮೆನೇಜರ್‌ ಪಿಂಡಾರ ಸ್ವಾಗತಿಸಿ, ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!