ಉಡುಪಿ ನಗರದಲ್ಲಿ ದಿಶಾ ಸರ್ಜಿಕಲ್ಸ್ ಆ್ಯಂಡ್ ಲೈಫ್ಕೇರ್ ಉದ್ಘಾಟನೆ
ಸಮಾಜಮುಖಿ ಕಾರ್ಯಗಳೊಂದಿಗೆ ಉದ್ಯಮ ಸಾಗಿದಾಗ ಯಶಸ್ಸು ಶತಸಿದ್ಧ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ : ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಉದ್ಯಮ ಸಾಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಗುಣಮಟ್ಟದ ಉತ್ಪನ್ನಗಳೊಂದಿಗೆ ಉತ್ತಮ ಸೇವೆ ಒದಗಿಸಿದಾಗ ಬೇಡಿಕೆ ಹೆಚ್ಚಾಗಲಿದೆ. ಪ್ರಧಾನಿಯವರ ಸಂಕಲ್ಪವಾದ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಡಿ ಆರಂಭಗೊಂಡ ಈ ಉದ್ಯಮ ಅಭಿವೃದ್ಧಿ ಹೊಂದಲಿ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಉಡುಪಿಯ ಹಳೆ ಡಯಾನ ಸರ್ಕಲ್ನ ಬಳಿ ಕಲ್ಪನಾ ರೆಸಿಡೆನ್ಸಿ ಕಟ್ಟಡದ ನೆಲ ಮಹಡಿಯಲ್ಲಿ ನೂತನವಾಗಿ ತೆರೆಯಲಾದ ದಿಶಾ ಸರ್ಜಿಕಲ್ಸ್ ಆ್ಯಂಡ್ ಲೈಫ್ಕೇರ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಬ್ಯಾಂಕಿಂಗ್, ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆ ಪ್ರಪಂಚದಾದ್ಯಂತ ಹೆಸರು ಗಳಿಸಿದೆ. ಉಡುಪಿಯ ಹೆಸರನ್ನು ಬಹಳ ಹಿಂದಿನಿಂದಲೂ ಇಲ್ಲಿನ ಹಿರಿಯರು ಬಹು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಕೊರೊನಾ ಸಂದರ್ಭ ರಾಜ್ಯಕ್ಕೆ ಎನ್95 ಮಾಸ್ಕ್ ಒದಗಿಸುವ ಮೂಲಕ ಭರತ್ ಶೆಟ್ಟಿ ನೇತೃತ್ವದ ಸಂಸ್ಥೆ ಶ್ಲಾಘನೀಯ ಕಾರ್ಯವೆಸಗಿದೆ. ವಿದ್ಯೆ ಮತ್ತು ಆರೋಗ್ಯ ಉದ್ಯಮವಾಗಬಾರದು. ಸೇವೆಯೋಪಾದಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಉದ್ಯಮ ಇನ್ನಷ್ಟು ಬೆಳವಣಿಗೆ ಹೊಂದಿ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ಲಾನ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ಟಿ. ಸುಧಾಕರ್ ಪೈ ಶುಭಾಂಶನೆಗೈದರು.
ಮೈಸೂರು ಎಲೆಕ್ಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್. ಚಂದ್ರಶೇಖರ್, ಹೈಟೆಕ್ ಆಸ್ಪತ್ರೆಯ ನಿರ್ದೇಶಕ ಡಾ| ಟಿ.ಎಸ್. ರಾವ್ ಮಾತನಾಡಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಉಡುಪಿ ನಗರಸಭಾ ಸದಸ್ಯೆ ಮಾನಸ ಸಿ. ಪೈ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಸಖಾರಾಮ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಮ್. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಸಂಸ್ಥೆಯ ಪಾಲುದಾರರಾದ ಭರತ್ ಶೆಟ್ಟಿ ಅಂಬಲಪಾಡಿ, ಜಯ ಸನಿಲ್, ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.